– ಮುಂದಿನ ಜನ್ಮದಲ್ಲಿ ಭೇಟಿಯಾಗ್ತೇನೆ
ಮುಂಬೈ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಿವುಡ್ ನಟಿ ದಿವ್ಯಾ ಚೌಕ್ಸಿ ಭಾನುವಾರ ನಿಧನರಾಗಿದ್ದಾರೆ.
ದಿವ್ಯಾ ಕೆಲ ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಗೆ ಕ್ಯಾನ್ಸರ್‌ಗೆ ತುಂಬಾ ಚಿಕ್ಕವಯಸ್ಸಿನಲ್ಲಿಯೇ ದಿವ್ಯಾ ಮೃತಪಟ್ಟಿದ್ದಾರೆ. ದಿವ್ಯಾ ಸಾಯುವ 15 ಗಂಟೆಗಳ ಮುನ್ನ ತಮ್ಮದೇ ಸಾವಿನ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
“ನಾನು ತಿಳಿಸ ಬಯಸುವುದನ್ನು ಹೇಳಲು ಪದಗಳು ಸಾಕಾಗುವುದಿಲ್ಲ. ಹೆಚ್ಚು ಕಡಿಮೆ ಹಲವು ತಿಂಗಳುಗಳ ನಂತರ ಈ ವಿಚಾರವನ್ನು ನಿಮಗೆ ಹೇಳುತ್ತಿದ್ದೇನೆ. ಈಗ ನಿಮಗೆ ಹೇಳುವ ಸಮಯ ಬಂದಿದೆ. ನಾನು ಮರಣಶಯ್ಯೆಯಲ್ಲಿದ್ದೇನೆ. ನಾನು ಬಲಶಾಲಿ. ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇನೆ. ದುಃಖ, ನೋವುಗಳಿಲ್ಲದ ಮತ್ತೊಂದು ಜೀವನ ನನಗಿರಲಿ. ದಯವಿಟ್ಟು ಯಾರು ಪ್ರಶ್ನಿಸಬೇಡಿ” ಎಂದು ತಮ್ಮ ಸಾವಿನ ಬಗ್ಗೆ ಬರೆದುಕೊಂಡಿದ್ದಾರೆ.
ದಿವ್ಯಾ 2011 ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ ಕೆಲ ಸಿನಿಮಾ, ಟಿವಿ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ದಿವ್ಯಾ ಗಾಯಕಿಯಾಗಿ ಖ್ಯಾತಿ ಪಡೆದುಕೊಂಡಿದ್ದಾರೆ.
ದಿವ್ಯಾ ಚೌಕ್ಸಿ ಸಂಬಂಧಿ ಅಮಿಶ್ ವರ್ಮಾ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದುಃಖದಿಂದ ಹೇಳಿಕೊಂಡಿದ್ದಾರೆ. “ನನ್ನ ಸಂಬಂಧಿ ದಿವ್ಯಾ ಚೌಕ್ಸಿ ಕ್ಯಾನ್ಸರ್‌ನಿಂದ ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಹಂಚಿಕೊಳ್ಳಲು ನನಗೆ ತುಂಬಾ ಬೇಸರವಾಗಿದೆ. ದಿವ್ಯಾ ಲಂಡನ್‍ನಲ್ಲಿ ಆ್ಯಕ್ಟಿಂಗ್ ಕೋರ್ಸ್ ಮಾಡಿದ್ದರು. ಅಲ್ಲದೇ ಒಂದೆರಡು ಸಿನಿಮಾ, ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ದಿವ್ಯಾ ಗಾಯಕಿಯಾಗಿ ಖ್ಯಾತಿ ಪಡೆದಿದ್ದಾರೆ. ಇಂದು ಅವಳು ನಮ್ಮನ್ನು ಅಗಲಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದು ದುಃಖದಿಂದ ಬರೆದುಕೊಂಡಿದ್ದಾರೆ.