– ಹೆತ್ತವರ ಕಣ್ಮುಂದೆಯೇ ಯುವತಿ ಆತ್ಮಹತ್ಯೆ
ವಿಜಯಪುರ: ಯುವತಿಯೊಬ್ಬಳು ಭೀಮಾ ನದಿಗೆ ಹಾರುವ ಮೂಲಕ ಪೋಷಕರ ಕಣ್ಮುಂದೆಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.
ಯುವತಿಯನ್ನು ಐಶ್ವರ್ಯ ಶ್ರೀಪಾಲ ಕಬ್ಬಿನ(20) ಎಂದು ಗುರುತಿಸಲಾಗಿದೆ. ಧಾರವಾಡದ ನವಲಗುಂದ ಪಟ್ಟಣದ ನಿವಾಸಿಯಾಗಿರುವ ಈಕೆ ತನ್ನ ಕುಟುಂಬದವರೊಂದಿಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ನದಿಗೆ ಹಾರಿದ್ದಾಳೆ.
ಐಶ್ವರ್ಯಾ ತನ್ನ ಕುಟುಂಬಸ್ಥರ ಜೊತೆ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಈ ವೇಳೆ ವಿಜಯಪುರದ ಆಲಮೇಲ ಮತ್ತು ಕಲಬುಗಿಯ ಅಫಜಲಪುರ ತಾಲೂಕು ನಡುವೆ ಭೀಮಾನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಬಳಿ ಬರುತ್ತಿದ್ದಂತೆಯೇ ವಾಹನವನ್ನು ನಿಲ್ಲಿಸುವಂತೆ ಹೇಳಿದ್ದಾಳೆ. ಅಲ್ಲದೆ ನಾನು ನದಿಗೆ ನಾಣ್ಯ ಹಾಕಬೇಕು ಎಂದು ಹೇಳಿ ವಾಹನದಿಂದ ಇಳೀದು ಸೇತುವೆಯ ಮೂಲೆಗೆ ಹೋಗಿ ತಕ್ಷಣವೇ ನದಿಗೆ ಹಾರಿದ್ದಾಳೆ.
ಕಣ್ಣಮುಂದೆಯೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ.