– ಮಂಡ್ಯದಲ್ಲಿ ತಮಿಳುನಾಡು ಕೋಳಿಗಳ ಕಾರುಬಾರು
– 50 ದಿನಕ್ಕೆ ಬೆಳೆಯುತ್ತೆ ತಮಿಳುನಾಡು ಕೋಳಿ
ಮಂಡ್ಯ: ಹೈಬ್ರೀಡ್ ಕೋಳಿಯನ್ನು ನಾಟಿ ಕೋಳಿ ಎಂದು ಬಿಂಬಿಸಿ ಮಾರಾಟ ಮಾಡುತ್ತಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯಾದ್ಯಾಂತ ಹೈಬ್ರೀಡ್ ಕೋಳಿಯನ್ನು ನಾಟಿ ಕೋಳಿ ಎಂದು ತಮಿಳುನಾಡಿವರು ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಗ್ರಾಹಕರಿಗೆ ಮಾತ್ರವಲ್ಲದೇ ಸ್ಥಳೀಯ ನಾಟಿ ಕೋಳಿ ಸಾಕಣಿಕೆಯ ರೈತರಿಗೂ ಸಹ ಅನ್ಯಾಯವಾಗುತ್ತಿದೆ. ಜಿಲ್ಲೆಯಾದ್ಯಾಂತ ತಮಿಳುನಾಡು ಕೋಳಿ ಜಾಲ ಹೆಚ್ಚಾಗಿದ್ದು, ನಾಟಿ ಕೋಳಿ ಸಾಕಾಣಿಕೆಯ ರೈತರು ಕಂಗಾಲಾಗಿದ್ದಾರೆ. ಈ ಕೋಳಿ ಸೇವೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುವ ಭೀತಿ ಈಗ ಜನರಲ್ಲಿ ಎದುರಾಗಿದೆ.
ಮಂಡ್ಯ ಜಿಲ್ಲೆಯ ರೈತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬನ್ನು ಬೆಳೆಯುತ್ತಾರೆ ಎಂದು ಎಲ್ಲರು ತಿಳಿದಿದ್ದಾರೆ. ಆದರೆ ಇಲ್ಲಿನ ರೈತರು ಉಪಕಸುಬಾಗಿ ನಾಟಿ ಕೋಳಿಯನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾಕಾಣಿಕೆ ಮಾಡುತ್ತಾರೆ. ಇದೀಗ ಇಂತಹ ನಾಟಿಕೋಳಿ ಸಾಕಾಣಿಕೆಯ ರೈತರಿಗೆ ತಮಿಳುನಾಡಿನವರು ಮುಳ್ಳಾಗಿ ನಿಂತಿದ್ದಾರೆ. ತಮಿಳುನಾಡಿನಿಂದ ಕೆಲವರು ಜೀಪ್ ಹಾಗೂ ಆಪೇ ಆಟೋಗಳಲ್ಲಿ ಹೈಬ್ರಿಡ್ ಕೋಳಿಗಳನ್ನು ಮಂಡ್ಯ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ ತಂದು ನಾಟಿ ಕೋಳಿ ಎಂದು ಒಂದು ಕೋಳಿಯನ್ನು 90 ರಿಂದ 100 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಈ ಕೋಳಿಗಳು ನೋಡಲು ನಾಟಿ ಕೋಳಿಗಳ ರೀತಿ ಕಾಣುವುದರಿಂದ ಜನರು ಇವು ನಾಟಿ ಕೋಳಿ ಇರಬಹುದು ಎಂದು ಮಾರುಹೋಗಿ ಖರೀದಿ ಮಾಡಲು ಮುಗಿ ಬಿಳುತ್ತಿದ್ದಾರೆ.
ಒಂದು ನಾಟಿ ಕೋಳಿ ಬೆಳವಣಿಗೆಯಾಗಬೇಕೆಂದರೆ 100 ರಿಂದ 120 ದಿನಗಳಿಗೂ ಅಧಿಕ ದಿನಗಳು ಬೇಕು. ಆದರೆ ತಮಿಳುನಾಡಿನಿಂದ ಬರುತ್ತಿರುವ ಕೋಳಿಗಳು ಕೇವಲ 50 ದಿನಗಳಲ್ಲಿ ಬೆಳವಣಿಗೆಯಾಗಿವೆ. ಈ ಕೋಳಿಗಳು ಸಂಪೂರ್ಣವಾಗಿ ಔಷಧಿಯಿಂದಲೇ ಬೆಳವಣಿಗೆಯಾಗುವುದರಿಂದ ಆರೋಗ್ಯದಲ್ಲಿ ಏರು ಪೇರಾಗುವುದರ ಜೊತೆಗೆ ಇತರೆ ಕಾಯಿಲೆಗಳಿಗೆ ತುತ್ತಾಗುವ ಸನ್ನಿವೇಶಗಳು ಸಹ ಎದುರಾಗುತ್ತವೆ. ಹೀಗಿರುವಾಗ ತಮಿಳುನಾಡಿನಿಂದ ಇಂತಹ ಕೋಳಿಗಳನ್ನು ತಂದು ಬೀದಿ ಬೀದಿಯಲ್ಲಿ ವ್ಯಾಪಾರ ಮಾಡುವುದರ ಜೊತೆಗೆ ರಿಟೈಲರ್ ವ್ಯಾಪಾರಿಗಳಿಗೆ ನೀಡಿ ಅವರಿಂದ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಜನರಿಗೆ ಹಾಗೂ ರೈತರಿಗೆ ಮೋಸ ಮಾಡಲಾಗುತ್ತಿದೆ. ಈ ಬಗ್ಗೆ ರೈತರು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ.
ತಮಿಳುನಾಡಿನ ಕೋಳಿ ವ್ಯಾಪಾರಿಗಳು ನಾಟಿ ಕೋಳಿ ಎಂದು ಹೈಬ್ರಿಡ್ ಕೋಳಿಗಳನ್ನು ಮಾರಾಟ ಮಾಡುವ ಮೂಲಕ ಜನರಿಗೆ ಹಾಗೂ ರೈತರಿಗೆ ಅನ್ಯಾಯ ಮಾಡುತ್ತಾ ಬರುತ್ತಿದ್ದಾರೆ. ಇದರಿಂದ ಹೆಚ್ಚಿನ ತೊಂದರೆ ಆಗುವ ಮುಂಚೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಮಿಳುನಾಡಿನ ಈ ಹೈಬ್ರಿಡ್ ಕೋಳಿಗಳು ಕರ್ನಾಟಕ ಗಡಿಯನ್ನು ತಲುಪದ ಹಾಗೇ ನೋಡಿಕೊಳ್ಳಬೇಕು ಎಂದು ಜನರು ಮನವಿ ಮಾಡಿಕೊಂಡಿದ್ದಾರೆ.