ಮಂಗಳೂರು: ಯಕ್ಷಗಾನ ಮೇಳಗಳು ಕೋವಿಡ್ 19 ನಿಯಮಗಳನ್ನು ಅಳವಡಿಸಿಕೊಂಡು ನವೆಂಬರ್ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟೀಲು, ಬಪ್ಪನಾಡು, ಸಸಿಹಿತ್ಲು ಸೇರಿದಂತೆ 20ಕ್ಕೂ ಹೆಚ್ಚು ವೃತ್ತಿಪರ ತೆಂಕುತಿಟ್ಟಿನ ಯಕ್ಷಗಾನ ಮೇಳಗಳಿದ್ದು, ಸರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ಪೂರಕ ಕೆಲಸಗಾರರಿದ್ದಾರೆ. ಕೊರೊನಾದಿಂದಾಗಿ ಯಕ್ಷಗಾನಗಳು ನಡೆಯದೆ ಕಲಾವಿದರು ಸಂಕಷ್ಟದಿಂದ ಇದ್ದಾರೆ. ಹೀಗಾಗಿ ಯಕ್ಷಗಾನ ಮೇಳಗಳು ಕೋವಿಡ್ 19 ನಿಯಮಗಳನ್ನು ಅಳವಡಿಸಿಕೊಂಡು ನವೆಂಬರ್ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಅಧಿಕಾರಿಗಳು, ಕಲಾವಿದರು ಹಾಗೂ ಮೇಳಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
Advertisement
Advertisement
ಕಲಾವಿದರ ಪರವಾಗಿ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಉಜಿರೆ ಅಶೋಕ್ ಭಟ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಸ್ಯಕಲಾವಿದ ಸೀತಾರಾಮ್ ಕುಮಾರ್ ಮಾತನಾಡುತ್ತಾ, ವೃತ್ತಿಪರ ಯಕ್ಷಗಾನ ಮೇಳಗಳು ನಿಂತಲ್ಲಿ ಕಲಾವಿದರ ಬದುಕು ದುಸ್ತರವಾಗುವುದು. ಈಗಾಗಲೇ ಕೋವಿಡ್ 19 ನಿಂದಾಗಿ ನೊಂದ ಕಲಾವಿದರ ಕುಟುಂಬದ ನೆರವಿಗೆ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದು ಮನವಿ ಮಾಡಿದರು.
Advertisement
ಕಟೀಲು ದೇವಳದ ಆಡಳಿತ ಮೊಕ್ತೇಸರ ಶ್ರೀ ಹರಿ ಅಸ್ರಣ್ಣ ಮಾತನಾಡಿ, ಕಟೀಲಿನ ಆರು ಮೇಳಗಳು ನಿಗದಿತ ಸಮಯದಲ್ಲಿ ಪ್ರದರ್ಶನಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಬಪ್ಪನಾಡು, ಸಸಿಹಿತ್ಲು ಮೇಳಗಳ ಸಹಿತ ಅನೇಕರು ಕೊರೊನಾ ಸಂದರ್ಭದಲ್ಲಿ ಕಲಾವಿದರು ಮತ್ತು ವೃತ್ತಿಪರ ಮೇಳಗಳ ಸಮಸ್ಯೆಗಳನ್ನು ವಿವರಿಸಿದರು.
ಈಗಿರುವ ಮೇಳಗಳಲ್ಲಿ ಯಾವುದಾದರೂ ನಿಲುಗಡೆಯಾದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿಯ ಸಂಪನ್ಮೂಲವಿರುವ ದೇವಳದ ಮೂಲಕ ಹೆಚ್ಚುವರಿ ಮೇಳಗಳನ್ನು ರಚಿಸಲು ಇಲಾಖೆ ಪರಿಶೀಲಿಸಿ ಬೇಕೆಂಬ ಮನವಿ ಸಭೆಯಲ್ಲಿ ಮೂಡಿಬಂತು.
ಸರ್ಕಾರದ ಪರವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಇಂತಹ ಪರಿಸ್ಥಿತಿಯಲ್ಲಿ ಯಕ್ಷಗಾನ ಮೇಳಗಳ ಕೊನೆಯ ಕಲಾವಿದನಿಗೂ ತೊಂದರೆ ಆಗದಂತೆ ಸರ್ಕಾರ ಕಲಾವಿದರ ಬೆಂಬಲಕ್ಕೆ ನಿಲ್ಲಲಿದೆ ಎಂದರು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.