– ಸ್ಥಳಾಂತರಕ್ಕೆ ಒಪ್ಪದ ಜನ, ಮನವೊಲಿಸಲು ಸಚಿವರ ಕಸರತ್ತು
ಗದಗ: ನವಿಲು ತೀರ್ಥ ಡ್ಯಾಂ ನಿಂದ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿಸುವ ಹಿನ್ನೆಲೆ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪೂರ ಗ್ರಾಮ ಸಂಪೂರ್ಣ ನಡುಗಡ್ಡೆ ಆಗುವ ಭೀತಿ ಎದುರಾಗಿದೆ. ಹೀಗಾಗಿ ಜಿಲ್ಲಾಡಳಿತ ಈ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಿದೆ.
ಸಚಿವ ಸಿ.ಸಿ.ಪಾಟೀಲ್, ಜಿ.ಪಂ. ಅಧ್ಯಕ್ಷ ಕೆಂಚನಗೌಡ್ರ ಸಹ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಮುಂದಾದರು. ಈ ವೇಳೆ ಕಳೆದ ವರ್ಷದ ಜಿಲ್ಲಾಡಳಿತದ ವೈಫಲ್ಯವನ್ನು ಜನರು ಪುನರುಚ್ಛರಿಸಿದರು. ಹಿಂದಿನದ್ದು ಬಿಡಿ ನಿಮಗೆ ಕೈ ಮುಗಿಯುತ್ತೇನೆ ಎರಡು ದಿನ ಬೆಳ್ಳೇರಿ ಪರಿಹಾರ ಕೇಂದ್ರದಲ್ಲಿ ಉಳಿದುಕೊಳ್ಳಿ ಎಂದು ಸಚಿವ ಸಿ.ಸಿ ಪಾಟೀಲ್ ಬೇಡಿಕೊಂಡರು.
ಹೀಗೆ ಮಳೆ ಮುಂದುವರೆದರೆ, ಹೆಚ್ಚಿನ ನೀರು ಬಿಡುವುದರಿಂದ ಮತ್ತೆ ಲಖಮಾಪುರ ಗ್ರಾಮ ನಡುಗಡ್ಡೆಯಂತಾಗುತ್ತೆ. ದಯವಿಟ್ಟು ಎಲ್ಲರೂ ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಜನರಿಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿನ ಜನ ಮಾತ್ರ ಬೇರೆಡೆ ತೆರಳಲು ಸಿದ್ಧರಿಲ್ಲ.
ರಾಮದುರ್ಗ ರಸ್ತೆಯ ಕ್ರಾಸ್ ನಲ್ಲಿ ಶೆಡ್ ನೀರ್ಮಿಸುವಂತೆ ಜನ ಒತ್ತಾಯ ಮಾಡುತ್ತಿದ್ದು, ಶೀಘ್ರದಲ್ಲೇ ಶೆಡ್ ನಿರ್ಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದರು. ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ಹಾಗೂ ಇತರರು ಇದ್ದರು.