ಯಾದಗಿರಿ: ಕೊರೊನಾ ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದ ಯುವಕನ ಮಾಹಿತಿ ಪಡೆಯಲು ಮನೆಗೆ ಹೋದ ಮಹಿಳಾ ಸಿಬ್ಬಂದಿ ಮೇಲೆ ಪುಂಡ ಯುವಕನೋರ್ವ ಮೃಗಿಯ ವರ್ತನೆ ತೋರಿ ಹಾಡಹಗಲೇ ಅಸಭ್ಯ ನಡೆದುಕೊಂಡಿದ್ದಾನೆ. ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದ ಆನೆಗುಂದಿ ಓಣಿಯಲ್ಲಿ ನಡೆದಿದೆ.
ಆನೆಗುಂದಿ ಓಣಿಯಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಧೃಡವಾಗಿತ್ತು. ಹೀಗಾಗಿ ಈತನ ಅಕ್ಕಪಕ್ಕದ ಮನೆಗಳಲ್ಲಿ ನರ್ಸ್ ನಾಗೇಶ್ವರಿ ಮಾಹಿತಿಯನ್ನು ಪಡೆಯುತ್ತಿದ್ದರು. ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದ ಯುವಕ ತನ್ನ ಮಾಹಿತಿ ನೀಡದೇ ಕೊರೊನಾ ವಾರಿಯರ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಪುಂಡ ಯುವಕ ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದು ಗೊತ್ತಾಗಿದೆ. ಹೀಗಾಗಿ ನರ್ಸ್ ಆತನ ಬಳಿ ಮಾಹಿತಿ ಕೇಳಲು ಮುಂದಾಗಿದ್ದರು.
ನರ್ಸ್ ಮಾಹಿತಿ ಕೇಳುತ್ತಿರುವಾಗ ಪುಂಡ ಯುವಕ ಅಸಭ್ಯ ವರ್ತನೆ ತೋರಲು ಮುಂದಾಗಿದ್ದಾನೆ. ಯುವಕನ ವರ್ತನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲು ನರ್ಸ್ ಮುಂದಾಗಿದ್ದಾರೆ. ಈ ವೇಳೆ ಮಹಿಳೆಯ ಮೇಲೆ ದಾಳಿ ಮಾಡಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ನರ್ಸ್ ಹತ್ತಿರ ಅಸಭ್ಯವಾಗಿ ನಡೆದುಕೊಂಡಿದ್ದಾನೆ.
ಮಾಹಿತಿ ಪಡೆದುಕೊಳ್ಳಲು ಮನೆ- ಮನೆಗೆ ತೆರಳುವ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಗೆ ರಾಜ್ಯದಲ್ಲಿ ನಿಜಕ್ಕೂ ರಕ್ಷಣೆ ಇದೆಯಾ ಅಂತ ಅನುಮಾನ ಮೂಡುತ್ತಿದೆ. ಈ ಘಟನೆಯಿಂದ ಸರ್ಕಾರ ಕೊರೊನಾ ವಾರಿಯರ್ಸ್ ರಕ್ಷಣೆಗೆ ಎಷ್ಟೇ ಕಠಿಣ ಕಾನೂನು ತಂದರೂ ಪ್ರಯೋಜನವಾಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.