ಕಾರವಾರ: ಪರೀಕ್ಷೆ ಬರೆಯಲು ತೆರಳಬೇಕಿದ್ದ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಕೋಲಾ ತಾಲೂಕಿನ ಹಾರವಾಡಾ ಗ್ರಾಮದ ಒಕ್ಕಲಕೇರಿಯಲ್ಲಿ ನಡೆದಿದೆ.
ನಾಗರತ್ನಾ ಗೌಡ (21) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಉಳವರೆಯ ಬೊಳಕುಂಟೆ ಗ್ರಾಮದ ನಾಗರತ್ನಾ ಹಾರವಾಡದ ತನ್ನ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು. ಕಲಿಕೆಯಲ್ಲೂ ಮುಂದಿದ್ದ ನಾಗರತ್ನಾ ನರ್ಸಿಂಗ್ ಮಾಡುತ್ತಿದ್ದಳು.
ಸೋಮವಾರ ನರ್ಸಿಂಗ್ ಕೋರ್ಸ್ ಪರೀಕ್ಷೆ ಬರೆದು ಬಂದಿದ್ದ ಯುವತಿ ಮಂಗಳವಾರ ಪರೀಕ್ಷೆಗೆ ತೆರಳುವ ಮುನ್ನವೇ ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಬಾಗಿಲು ಹಾಕಿಕೊಂಡು ನೇಣಿಗೆ ಕೊರಳೊಡ್ಡಿದ್ದಾಳೆ. ಬಳಿಕ ಮನೆಯವರು ಬಂದು ಬಾಗಿಲು ಒಡೆದು ನಾಗರತ್ನಾಳನ್ನು ನೇಣಿನಿಂದ ರಕ್ಷಿಸುವ ಪ್ರಯತ್ನ ಮಾಡಿದರೂ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಳು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಆಗಮಿಸಿ ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್ ಐ ಸಂಪತ್ ಕುಮಾರ್ ಪರಿಶೀಲನೆ ನಡೆಸಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.