ಧಾರವಾಡ: ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಕೂಲಿಕಾರರಿಗೆ ನರೇಗಾ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಕೆಲಸ ನೀಡಿದೆ. ಕೆರೆ ಹೂಳೆತ್ತುವ ಈ ಕಾರ್ಯಕ್ಕೆ ಈಗ ಪದವಿ ಮುಗಿಸಿದವರೂ ಬರುವಂತಾಗಿದೆ.
ಜಿಲ್ಲೆಯ ಪ್ರಭುನಗರ ಹೊನ್ನಾಪುರ ಗ್ರಾಮದ ಪದವಿ ಮುಗಿಸಿದ ಯುವಕ ಪ್ರಕಾಶ್ ಕೆರೆ ಹೂಳೆತ್ತುವ ಕಾಮಗಾರಿಗೆ ಬರುತ್ತಿದ್ದಾನೆ. ಬಿಕಾಂ ಮುಗಿಸಿರುವ ಇವರಿಗೆ ಈಗ ಕೆಲಸ ಇಲ್ಲ. ಹೀಗಾಗಿ ನರೇಗಾ ಕಾಮಗಾರಿ ಆರಂಭವಾಗುತಿದ್ದಂತೆ ಇವರು ಸಹ ಕೆರೆ ಹೂಳೆತ್ತುವ ಕೆಲಸಕ್ಕೆ ಹೋಗುತ್ತಿದ್ದಾರೆ. ದಿನಕ್ಕೆ 275 ರೂ.ಗಳಿಗೆ ಕೂಲಿ ಮಾಡುತ್ತಿದ್ದು, ವಾರಕ್ಕೆ 1,925 ರೂ.ಗಳನ್ನ ಗಳಿಸಿ ಜೀವನ ಸಾಗಿಸುತಿದ್ದಾರೆ. ಇದನ್ನೂ ಓದಿ: ನರೇಗ ಕೂಲಿ ಕೆಲಸ ಮಾಡ್ತಿದ್ದ ಎಂಎಸ್ಸಿ ಪದವೀಧರೆ- ಸಚಿವರಿಂದ ಉದ್ಯೋಗದ ಭರವಸೆ
ಲಾಕ್‍ಡೌನ್ ಪರಿಣಾಮವಾಗಿ ಕೆಲಸ ಇಲ್ಲದ ಪದವೀಧರರು ಸಹ ನರೇಗಾ ಯೋಜನೆಯಡಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುತಿದ್ದಾರೆ. ಅಲ್ಲದೆ ರೈತರ ಬಳಿ ಕೂಲಿ ಕೆಲಸಕ್ಕೆ ಹೋಗುತಿದ್ದ ಹಲವು ಕಾರ್ಮಿಕರು ಹಾಗೂ ಕಡಿಮೆ ಜಮೀನು ಇರುವ ರೈತರಿಗೆ ನರೇಗಾ ಆಸರೆಯಾಗಿದೆ. ಸದ್ಯ ಗ್ರಾಮದ ಕೆರೆ ಹೂಳೆತ್ತುವ ಕೆಲಸ ನಡೆದಿದ್ದು, ಕೆರೆ ಕೆಲಸ ಮುಗಿನ ನಂತರ ನರೇಗಾದಲ್ಲಿ ಬೇರೆ ಕೆಲಸ ಸಿಕ್ಕರೆ ಜನ ಅಲ್ಲಿಗೇ ಹೋಗಲಿದ್ದಾರೆ.