ನಮ್ಮವರು ನಿರ್ದೋಷಿಗಳು, ಅರೆಸ್ಟ್ ಮಾಡಿದ್ರೆ ಮನೆ ನಡೆಯುವುದಾದ್ರೂ ಹೇಗೆ?

Public TV
2 Min Read
DJ LADY

– ಮನೆಗೆ ನುಗ್ಗಿ ಬೆಡ್‍ರೂಮ್ ಪರಿಶೀಲನೆ ನಡೆಸಿದ್ರು
– ಪೊಲೀಸರ ಮಿಡ್‍ನೈಟ್ ಆಪರೇಷನ್‍ಗೆ ವಿರೋಧ
– ಗಲಾಟೆಯ ಅರ್ಥವೂ ತಿಳಿಯದ ಇಬ್ಬರು ಮೌಲ್ವಿಗಳನ್ನ ಕರ್ಕೊಂಡು ಹೋದ್ರು

ಬೆಂಗಳೂರು: ಪೊಲೀಸರು ಮಿಡ್‍ನೈಟ್ ಆಪರೇಷನ್ ಮೂಲಕ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಇದೀಗ ಪೊಲೀಸರ ಮಿಡ್‍ನೈಟ್ ಆಪರೇಷನ್‍ಗೆ ಡಿಜೆ ಹಳ್ಳಿ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಗಲಾಟೆ ನಡೆದ ದಿನದಿಂದ ಪೊಲೀಸರು ಡಿಜೆ ಹಳ್ಳಿಯಲ್ಲಿ ಗಲಭೆಯಲ್ಲಿ ಪಾಲ್ಗೊಂಡ ಪುಂಡರ ಹಿಡಿಯಲು ಮಿಡ್‍ನೈಟ್ ಆಪರೇಷನ್ ನಡೆಸುತ್ತಿದ್ದಾರೆ. ಆದರೆ ಡಿಜೆ ಹಳ್ಳಿಯಲ್ಲಿ ಖಾಕಿಗಳು ಲಾಠಿ ಹಿಡಿದುಕೊಂಡು ಮನೆಯ ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ನಮ್ಮ ಮನೆಯಲ್ಲಿ ಯಾರು ಪಾಲ್ಗೊಂಡಿಲ್ಲ. ಇದಕ್ಕೂ ನಮಗೂ ಸಂಬಂಧ ಇಲ್ಲ ಅಂದರು ಕೇಳದೇ ಪೊಲೀಸರು ಮನೆ ಒಡೆದಿದ್ದಾರೆ ಎಂದು ಸ್ಥಳೀಯ ಜನರು ವಿಡಿಯೋ ಹರಿಬಿಡುತ್ತಿದ್ದಾರೆ. ಕಿಟಕಿ ಗಾಜು ಮನೆಯ ಬಾಗಿಲು ಒಡೆದು ಹೋಗಿರುವ ದೃಶ್ಯಗಳ ಸಮೇತ ಸ್ಥಳೀಯರು ಆರೋಪಿಸುತ್ತಿದ್ದಾರೆ.

DJ HALLI 9 medium

ಬೆಳಗಿನ ಜಾವ 4-30ಕ್ಕೆ ಮನೆಗೆ ನುಗ್ಗಿ ಬಂದು ಬೆಡ್‍ರೂಮ್ ಹಾಗೂ ಬಾತ್‍ರೂಮ್ ಎಲ್ಲಾ ಪರಿಶೀಲನೆ ಮಾಡಿದರು. ನಮ್ಮ ಮನೆಯವರು ರಾತ್ರಿ 8 ಗಂಟೆಗೆ ಬಂದು ಮಲಗಿದ್ದರು. ಯಾಕೆ ಅಂತ ಕೇಳಿದರೆ ಪೊಲೀಸ್ ಠಾಣೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅವರಿಗೆ ಬುದ್ಧಿ ಹೇಳಲು ಆಗುವುದಿಲ್ಲಾ ನಿಮಗೆ ಎಂದರು. ನಮಗೂ ಮರ್ಯಾದೆ ನೀಡಲಿಲ್ಲ. ಅವರೇ ನಮ್ಮ ಮನೆ ನಡೆಸುವುದು. ಈವರೆಗೂ ಕಳಿಸಿಲ್ಲ ನಾವು ಏನೋ ಮಾಡಬೇಕು ಎಂದು ಡಿಜಿ ಹಳ್ಳಿ ಮಹಿಳೆ ಆರೋಪಿಸಿದ್ದಾರೆ.

ಬೆಳಗಿನ ಜಾವ 4 ಗಂಟೆಗೆ ಬಂದು ಬಾಗಿಲು ತೆಗೆಯಿರಿ ಎಂದರು. ನಾವು ಬಾಗಿಲು ತೆಗೆಯದಿದ್ದಾಗ ಗೇಟ್ ಮುರಿದು ನಮ್ಮವರನ್ನು ಕರೆದುಕೊಂಡು ಹೋದರು. ಅವರು ಯಾರ ವಿಷಯಕ್ಕೂ ಹೋಗುವುದಿಲ್ಲ ಅವರನ್ನು ಯಾಕೆ ಕರೆದುಕೊಂಡು ಹೋದರು ತಿಳಿಯಲಿಲ್ಲ ಎಂದು ಡಿಜೆ ಹಳ್ಳಿ ನಿವಾಸಿ ಹೇಳಿದ್ದಾರೆ.

DJ HALLI 8 1 medium

ಗಲಾಟೆ ನಡೆದಿರುವುದು ಡಿಜೆ ಹಳ್ಳಿಯಲ್ಲಿ. ನಾವು ವಾಸ ಮಾಡುವುದು 3 ಕಿಲೋಮೀಟರ್ ದೂರದಲ್ಲಿ. ನಮಗೆ ರಕ್ಷಣೆ ಮಾಡಬೇಕಾದ ಪೊಲೀಸರು ರಾತ್ರೋರಾತ್ರಿ ಬಾಗಿಲು ಮುರಿದು ನಮ್ಮ ಸಹೋದರರು ಹಾಗೂ ನಮ್ಮ ಮನೆ ಮೇಲೆ ವಾಸ ಮಾಡುವ ಇಬ್ಬರು ಮೌಲ್ವಿಗಳನ್ನು ಕರೆದುಕೊಂಡು ಹೋದರು. ಗಲಾಟೆ-ದಂಗೆಗಳ ಬಗ್ಗೆ ಅರ್ಥವೂ ತಿಳಿಯದ ಆ ಇಬ್ಬರು ಮೌಲ್ವಿಗಳನ್ನು ಕರೆದುಕೊಂಡು ಹೋದರು. ರಕ್ಷಣೆ ಮಾಡುವ ಪೊಲೀಸರು ತಾರತ್ಯಮ ನೀತಿ ಅನುಸರಿಸಿದರೆ ಹೇಗೆ? ಮನೆಗಳು ನಡೆಯುದಾದರೂ ಹೇಗೆ? ನಮ್ಮವರು ನಿರ್ದೋಷಿಗಳು. ತಕ್ಷಣವೇ ಅವರನ್ನು ಪೊಲೀಸರು ಬಿಡುಗಡೆ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದಿದ್ದಾರೆ.

DJ HALLI 1 medium

ಪ್ರವಾದಿ ಅವರ ಬಗ್ಗೆ ಅವಹೇಳನ ಮಾಡಿದ್ದು ತಪ್ಪು. ನಮ್ಮ ಜನರು ಪೊಲೀಸ್ ಠಾಣೆ ಬೆಂಕಿ ಹಾಕಿರುವುದೂ ತಪ್ಪು. ಘಟನೆ ಸಂಭವಿಸಿದ ವೇಳೆ ಕ್ರಮ ತೆಗೆದುಕೊಂಡಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ. ಇದು ಪೊಲೀಸರ ವೈಫಲ್ಯ. ಆದರೂ ನಮ್ಮ ರಾಜಕೀಯ ನಾಯಕರು, ಧರ್ಮಗುರುಗಳು ನಮ್ಮ ಜನರನ್ನು ಉಳಿಸಲು ಮುಂದಾಗಲಿಲ್ಲ. ಶಾಸಕರ ಮನೆಗೆ ಹೋಗಿ ನಮ್ಮ ಧರ್ಮಗುರುಗಳು ಸಂತಾಪ ಹೇಳಿದರು. ಆದರೆ ನಮ್ಮ ಅಮಾಯಕ ಜನರನ್ನು ಉಳಿಸಲು ಮುಂದಾಗದೆ ಇರುವುದು ಹೇಡಿತನ. ಪ್ರಚಾರ ಪಡೆದುಕೊಳ್ಳಲು ಮಾತ್ರ ಮುಂದೆ ಬರುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *