ನನಗೆ ನಾಯಕತ್ವದ ಪಟ್ಟ ಸಿಗಲು ಧೋನಿ ಪಾತ್ರ ದೊಡ್ಡದು- ಕೊಹ್ಲಿ

Public TV
2 Min Read
Virat Dhoni

– ವಿರಾಟ್ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಪಂದ್ಯ ರಿವೀಲ್

ಮುಂಬೈ: ನಾನು ಟೀಂ ಇಂಡಿಯಾ ನಾಯಕತ್ವವನ್ನು ಪಡೆಯುವಲ್ಲಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ದೊಡ್ಡ ಪಾತ್ರ ವಹಿಸಿದ್ದರು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಎಂ.ಎಸ್.ಧೋನಿ ನಾಯಕತ್ವದಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಪ್ರಾರಂಭಿಸಿದ ಕೊಹ್ಲಿ, ನಾಯಕತ್ವದ ಜವಾಬ್ದಾರಿಯನ್ನು ಇದ್ದಕ್ಕಿದ್ದಂತೆ ಪಡೆದುಕೊಂಡಿಲ್ಲ. ಧೋನಿ ಎಲ್ಲವನ್ನೂ ಗಮನಿಸಿಯೇ ನಾಯಕ್ವವನ್ನು ಬಿಟ್ಟುಕೊಟ್ಟಿದ್ದಾರೆ. ಈ ವಿಚಾರವನ್ನು ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಇನ್‍ಸ್ಟಾಗ್ರಾಮ್ ವೈಲ್ ಚಾಟ್‍ನಲ್ಲಿ ಕೊಹ್ಲಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ ದುಬಾರಿ ಶೂ ಕೊಡಿಸಿ ಮಾನವೀಯತೆ ಮೆರೆದ ‘ಮಿಸ್ಟರ್ 360’

dhoni kohli

“ನಾನು ಎಂದಿಗೂ ನಾಯಕನಾಗಬೇಕೆಂದು ಯೋಚಿಸಲಿಲ್ಲ. ಆಯ್ಕೆ ಮಾಡುವವರು ಕೂಡ ನನ್ನನ್ನು ಇದ್ದಕ್ಕಿದ್ದಂತೆ ನಾಯಕನನ್ನಾಗಿ ಮಾಡಿಲ್ಲ ಎಂದು ನಂಬುತ್ತೇನೆ. ಈ ಜವಾಬ್ದಾರಿಯನ್ನು ನೀಡುವ ಮೊದಲು ಅವರು ಧೋನಿ ಅವರನ್ನು ಕೇಳಿರಬೇಕು. ಈ ಮೂಲಕ ನಾನು ಟೀಂ ಇಂಡಿಯಾ ಕ್ಯಾಪ್ಟನ್ ಆಗಲು ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ನಂಬಿಕೆಯಿದೆ” ಎಂದು ವಿರಾಟ್ ತಿಳಿಸಿದ್ದಾರೆ.

“ನಾನು ತಂಡವನ್ನು ಸೇರಿದ ದಿನದಿಂದ ಬಹಳಷ್ಟು ಕಲಿಯಲು ಬಯಸಿದ್ದೆ. ಧೋನಿ ಅರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆ. ಅನೇಕ ಬಾರಿ ಅವರು ನಿರಾಕರಿಸಿದರು. ಆದರೆ ಇಷ್ಟಪಟ್ಟ ವಿಚಾರವನ್ನೂ ಚರ್ಚಿಸಿದರು. ಧೋನಿ ಯಾವಾಗಲೂ ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಅವರಿಂದ ಹೆಚ್ಚು ಹೆಚ್ಚು ಕಲಿತಿದ್ದೇನೆ. ನನ್ನ ಕುತೂಹಲದಿಂದಾಗಿ ತಂಡದ ಮುಂದಿನ ನಾಯಕನಾಗಬಹುದೆಂದು ಧೋನಿ ಬಹುಶಃ ನಂಬಿದ್ದರು” ಎಂದು ಕೊಹ್ಲಿ ಹೇಳಿದ್ದಾರೆ.

virat kohli 2

ಸಚಿನ್ ಜೊತೆ ಬ್ಯಾಟಿಂಗ್ ಸ್ಮರಣೀಯ ಕ್ಷಣ:
ಪಾಕಿಸ್ತಾನ ವಿರುದ್ಧ 183 ರನ್‍ಗಳ ಇನ್ನಿಂಗ್ಸ್ ಅನ್ನು ನೆನೆದ ಕೊಹ್ಲಿ, “ಪಾಕಿಸ್ತಾನ ತಂಡದ ಬೌಲಿಂಗ್ ಆಕ್ರಮಣವು ತುಂಬಾ ಪ್ರಬಲವಾಗಿತ್ತು. ಶಾಹಿದ್ ಅಫ್ರಿದಿ, ಸಯೀದ್ ಅಜ್ಮಲ್, ಉಮರ್ ಗುಲ್  ಮತ್ತು ಮೊಹಮ್ಮದ್ ಹಫೀಜ್ ಪಾಕ್ ತಂಡದಲ್ಲಿದ್ದರು. ಅಂತಹ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಬ್ಯಾಟಿಂಗ್ ಮಾಡಲು ನನಗೆ ಸಂತೋಷವಾಗಿತ್ತು. ಸಚಿನ್ 50 ರನ್ ಗಳಿಸಿದ್ದರು. ನಮ್ಮಿಬ್ಬರ ಜೊತೆಯಾಟದಲ್ಲಿ 100ಕ್ಕೂ ಹೆಚ್ಚು ರನ್ ಗಳಿಸಿದ್ವಿ. ಇದು ನನಗೆ ಮರೆಯಲಾಗದ ಕ್ಷಣ. ಈ ಇನ್ನಿಂಗ್ಸ್ ನನ್ನ ವೃತ್ತಿ ಜೀವನವನ್ನೇ ಬದಲಾಯಿಸಿತು” ಎಂದಿದ್ದಾರೆ.

Sachin Virat Pakistan

2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಧೋನಿ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದರು. ಇದರ ನಂತರ ಕೊಹ್ಲಿ ಅವರಿಗೆ ನಾಯಕತ್ವ ನೀಡಲಾಯಿತು. 2018ರಲ್ಲಿ ಭಾರತ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು. ಉಭಯ ದೇಶಗಳ ನಡುವಿನ 71 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಸರಣಿ ಜಯ ಸಾಧಿಸಿತ್ತು. ಕೊಹ್ಲಿ 2017ರ ಜನವರಿಯಲ್ಲಿ ಸೀಮಿತ ಓವರ್ ಗಳ ನಾಯಕತ್ವವನ್ನು ವಹಿಸಿಕೊಂಡರು.

ಕೊಹ್ಲಿ ನಾಯಕತ್ವದಲ್ಲಿ, ಭಾರತ ತಂಡವು ಈವರೆಗೆ ಒಟ್ಟು 117 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದೆ. ಅವರು ದೇಶದ ಎರಡನೇ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಂ.ಎಸ್.ಧೋನಿ 178 ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 104 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊಹಮ್ಮದ್ ಅಜರುದ್ದೀನ್ ಮೂರನೇ ಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ 97 ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *