– ಪ್ರಾಣಿ ಪ್ರೀತಿಗೆ ಕರಗಿತು ನೆಟ್ಟಿಗರ ಮನ
ವುಹಾನ್: ಪ್ರಾಣಿಗಳಿಗೆ ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಸಾಕು, ಅವು ಬೆಟ್ಟದಷ್ಟು ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಇಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿ.
ಹೌದು. ಚೀನಾದ ವುಹಾನ್ ನಗರದಲ್ಲಿ ಮುದ್ದಿನಿಂದ ಸಾಕಿದ ಶ್ವಾನವೊಂದು ತನ್ನ ಯಜಮಾನನನ್ನು ಕಾಯುತ್ತಾ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
Advertisement
ಶ್ವಾನ ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿದೆ. ಹೀಗಾಗಿ ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತು ಆತನ ಬರುವಿಕೆಗಾಗಿ ಕಾಯುತ್ತಾ ಕುಳಿತಿದೆ. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
Advertisement
ಅಲ್ಲದೆ ಸ್ಥಳೀಯ ನಿವಾಸಿಯೊಬ್ಬರು ಆ ಶ್ವಾನವನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಶ್ವಾನ ಮಾತ್ರ ಅವರ ಕೈಗೆ ಸಿಗದೇ ತನ್ನ ಯಜಮಾನ ಬರುತ್ತಾನೆಂಬ ಭರವಸೆಯಿಂದ ಕಾದು ಕುಳಿತಿದೆ. ಈ ಫೋಟೋವನ್ನು ನೋಡದರೆ ಎಂಥವರ ಮನಸ್ಸು ಕೂಡ ಕರಗದೇ ಇರದು.
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ವುಹಾನ್ ನ ಪ್ರಾಣಿ ಸಂರಕ್ಷಣಾ ಸಂಘದ ನಿರ್ದೇಶಕ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ನಾಯಿ ಫೋಟೋವನ್ನು ನೋಡಿ ಅದರ ಜಾಡು ಹಿಡಿಯಲು ಪ್ರಯತ್ನಿಸಿದ್ದೇನೆ. ಮೇ 30 ರಂದು ಸಂಜೆ ಯಂಗಟ್ಸ್ ಸೇತುವೆಯವರೆಗೆ ಶ್ವಾನ ತನ್ನ ಯಜಮಾನನನ್ನು ಹಿಂಬಾಲಿಸಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಸೇತುವೆಯಲ್ಲಿ ನಿಜವಾಗಿಯೂ ಏನು ಆಗಿದೆ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕತ್ತಲಿನಲ್ಲಿ ವಿಡಿಯೋ ಮಾಡಿದ್ದರಿಂದ ಅದರಲ್ಲಿ ಏನೂ ಕಾಣಿಸುತ್ತಿಲ್ಲ. ಆದರೆ ವ್ಯಕ್ತಿಯೊಬ್ಬ ಹಾರಿರುವುದು ಅಸ್ಪಷ್ಟವಾಗಿ ಗೋಚರವಾಗುತ್ತದೆ. ಸದ್ಯ ಆ ಶ್ವಾನಕ್ಕೆ ಹೊಸ ಯಜಮಾನನನ್ನು ಹುಡುಕಬೇಕಾಗಿದೆ. ಇಂತಹ ನಿಯತ್ತಿನ ಶ್ವಾನ ಈ ರೀತಿ ರಸ್ತೆಬದಿಯಲ್ಲಿ ಒದ್ದಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ದುಃಖವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವುಹಾನ್ ವ್ಯಕ್ತಿ ಮಾಡಿರುವ ಶ್ವಾನದ ಪೋಸ್ಟ್ ಸಾಮಾಜಿಕ ಜಾಲತಾಣಿಗರನ್ನು ಕಣ್ಣೀರು ಹಾಕುವಂತೆ ಮಾಡಿದೆ. ಅದರಲ್ಲಿ ಒಬ್ಬರು ಓ ಮೈ ಗಾಡ್, ನನ್ನ ಕಣ್ಣಲ್ಲಿ ನೀರು ತರಿಸಿತ್ತು ಎಂದು ಹೇಳಿದರೆ, ಇನ್ನೊಬ್ಬರು ದಯಮಾಡಿ ಶ್ವಾನವನ್ನು ರಸ್ತೆ ಬದಿಯಲ್ಲಿ ಬಿಡಬೇಡಿ. ಒಂದು ಒಳ್ಳೆಯ ಕುಟುಂಬಕ್ಕೆ ಅದನ್ನು ನೀಡಿ ಎಂದು ಕಮೆಂಟ್ ಮಾಡಿದ್ದಾರೆ.