ಹಾವೇರಿ: ಓಮ್ನಿ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಸಣ್ಣಗುಬ್ಬಿ ಕ್ರಾಸ್ ನಲ್ಲಿ ನಡೆದಿದೆ.
ಬೆಂಕಿ ಹೊತ್ತಿಕೊಂಡ ಓಮ್ನಿ ಕಾರನ್ನು ರೇವಣಪ್ಪ ಹುಗ್ಗೇರ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಈ ಕಾರಿನಲ್ಲಿ ನಾಲ್ಕು ಜನರು ಸೇರಿಕೊಂಡು ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನಿಂದ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಓಮ್ನಿಯಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಓಮ್ನಿಯಿಂದ ಕೆಳಗಿಳಿದಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ನಂತರ ನೋಡು ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದು ಹೋಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿನಂದಿಸುವ ಕಾರ್ಯ ಮಾಡಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.