ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ತಮಿಳು ನಟ ವಿಷ್ಣು ವಿಶಾಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇಂದು 37ನೇ ವಸಂತಕ್ಕೆ ಕಾಲಿಟ್ಟ ಜ್ವಾಲಾ ಗುಟ್ಟಾ ಅವರಿಗೆ ಅಚ್ಚರಿಯ ಬಹುಮಾನ ನೀಡಿರುವ ನಟ ವಿಷ್ಣು ವಿಶಾಲ್, ಎಂಗೇಜ್ಮೆಂಟ್ ರಿಂಗ್ ಮುಂದಿಟ್ಟು ಸಪ್ರ್ರೈಸ್ ನೀಡಿದ್ದರು. 2010ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜ್ವಾಲಾ ಗುಟ್ಟಾ ಅವರೊಂದಿಗೆ ನಿಶ್ಚಿತಾರ್ಥ ಆಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಈ ಕುರಿತು ತನ್ನ ಇನ್‍ಸ್ಟಾದಲ್ಲಿ ಬರೆದುಕೊಂಡಿರುವ ನಟ ವಿಷ್ಣು, ಜನ್ಮ ದಿನದ ಶುಭಾಶಯಗಳು ಜ್ವಾಲಾ ಗುಟ್ಟಾ, ಹೊಸ ಜೀವನ ಆರಂಭವಾಗಿದೆ. ನಮ್ಮ ಕುಟುಂಬ, ಅರ್ಯನ್ ಹಾಗೂ ನಮ್ಮ ಸುತ್ತಲಿನ ಜನರಿಗಾಗಿ ಹೊಸ ಸ್ಫೂರ್ತಿಯೊಂದಿಗೆ ಸಕಾರಾತ್ಮಕವಾಗಿ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡೋಣ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಬೇಕಿದೆ. ನಡುರಾತ್ರಿಯಲ್ಲಿ ಉಂಗುರವನ್ನು ಏರ್ಪರಿಸಿದ್ದಕ್ಕಾಗಿ ಜೈನ್ ಬಶಂತ್ ಧನ್ಯವಾದ ಎಂದು ವಿಷ್ಣು ಪೋಸ್ಟ್ ಮಾಡಿದ್ದಾರೆ.
ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಹೈದರಾಬಾದ್‍ನಲ್ಲೇ ಉಳಿದಿದ್ದ ಜಾಲ್ವಾ ಗುಟ್ಟಾ ಗೆಳೆಯನೊಂದಿಗೆ ದೂರವಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಜ್ವಾಲಾ, ಮಿಸ್ ಯೂ ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಷ್ಣು, ಈ ಸಮಯದಲ್ಲಿ ಸಾಮಾಜಿಕ ಅಂತರದ ಅಗತ್ಯವಿದೆ ಎಂದಿದ್ದರು.
ಜ್ವಾಲಾ ಗುಟ್ಟಾ ಹಾಗೂ ವಿಷ್ಣು ನಡುವಿನ ಪ್ರೇಮದ ಬಗ್ಗೆ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿತ್ತು. ಇಬ್ಬರ ಸಾಕಷ್ಟು ಫೋಟೋಗಳು ವೈರಲ್ ಆಗಿತ್ತು. ಅಲ್ಲದೇ ಜ್ವಾಲಾ ಗುಟ್ಟಾ ಪ್ರಿಯಕರಿನಿಗೆ ಕಿಸ್ ಮಾಡುತ್ತಿದ್ದ ಫೋಟೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಉಳಿದಂತೆ ನಟ ವಿಷ್ಣು ವಿಶಾಲ್ ಕಳೆದ ವರ್ಷದ ಜೂನ್‍ನಲ್ಲಿ ತನ್ನ ಪತ್ನಿ ರಜನಿ ಅವರಿಂದ ದೂರವಾಗಿದ್ದರು. ಇವರಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ಇತ್ತ ಜ್ವಾಲಾ ಗುಟ್ಟಾ ಕೂಡ ಪ್ರೀತಿಸಿ ಮದುವೆಯಾಗಿದ್ದ ಬ್ಯಾಡ್ಮಿಟನ್ ಆಟಗಾರ ಚೇತನ್ ಆನಂದ್ ಅವರಿಂದ ದೂರವಾಗಿದ್ದರು. ಅದಕ್ಕೂ ಮುನ್ನ ಜ್ವಾಲಾ ಅವರ ಹೆಸರು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ ಸುತ್ತಾಡುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು, ಆದರೆ ಇದನ್ನು ಇಬ್ಬರು ನಿರಾಕರಿಸಿದ್ದರು. ಸದ್ಯ ಜ್ವಾಲಾ, ವಿಷ್ಣು ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಶೀಘ್ರವೇ ಮದುವೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.