ಚಾಮರಾಜನಗರ: ಬಜಾರ್ ಸಿನಿಮಾ ಖ್ಯಾತಿಯ ನಟ ಧನ್ವೀರ್ ವಿರುದ್ಧ ಬಂಡೀಪುರದಲ್ಲಿ ಎಫ್‍ಐಆರ್ ದಾಖಲಾಗಿದೆ.
ಬಂಡೀಪುರದ ಜಿ.ಎಸ್ ಬೆಟ್ಟದಲ್ಲಿ ರಾತ್ರಿ ಸಫಾರಿ ನಡೆಸಿದ ಆರೋಪದ ಮೇಲೆ ಧನ್ವೀರ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಿಷೇದಿತ ಪ್ರದೇಶದೊಳಗೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 27/1ಅಡಿ ಪ್ರಕರಣ ದಾಖಲಾಗಿದೆ. ಇಂದು ಮೆಲುಕಾಮನಹಳ್ಳಿ ಆರ್.ಎಫ್.ಓ ಕಛೇರಿಗೆ ಧನ್ವೀರ್ ವಿಚಾರಣೆಗೆ ಹಾಜರಾಗಿದ್ದರು.
ಇಂದು ವಿಚಾರಣೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿ ನವೀನ್ ಕುಮಾರ್ ಕೇಳಿದ ರಾತ್ರಿ ಸಫಾರಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಧನ್ವೀರ್, ನಾನು ಸಂಜೆ ಹೊತ್ತಿಗೆ ಕಾಡಿನಿಂದ ಹೊರಗಿದ್ದೆ. ಅರಣ್ಯ ಇಲಾಖೆಯ ವಾಹನದಲ್ಲಿ ಸಫಾರಿ ಟಿಕೆಟ್ ಪಡೆದು ತೆರಳಿದ್ದು, ನೈಟ್ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಎಂದು ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ ಎನ್ನಲಾಗಿತ್ತು.
ಶುಕ್ರವಾರ ನಟ ಧನ್ವೀರ್ ನೈಟ್ ಸಫಾರಿ ಮಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಂಡೀಪುರ ಸಿಎಫ್‍ಒ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಧನ್ವೀರ್ ತೆಗೆದ ಫೋಟೋ, ವಿಡಿಯೋಗಳ ಸಮಯವನ್ನು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ವೈರಲ್ ಆಗಿದ್ದ ವಿಡಿಯೋ, ಸ್ಕ್ರೀನ್ ಶಾಟ್ ಗಳನ್ನು ಅರಣ್ಯ ಇಲಾಖೆಗೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ವಿಚಾರಣೆಯ ನಂತರ ಮಾತನಾಡಿದ್ದ ಆರ್.ಎಫ್.ಒ ನವೀನ್ ಕುಮಾರ್ ಧನ್ವೀರ್ ಬಂಡೀಪುರದಲ್ಲಿ ನೈಟ್ ಸಫಾರಿ ಮಾಡಿಲ್ಲ ಅಂತ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲ್ಲ ಅಂತ ತಿಳಿಸಿದ್ದರು.