– ಉಪಚುನಾವಣೆಗೆ ಏನೂ ತೀರ್ಮಾನ ಮಾಡಿಲ್ಲ
– ಏಳೆಂಟು ಮಂದಿ ಆಕಾಂಕ್ಷಿಗಳು ಇದ್ದಾರೆ
ಬೆಳಗಾವಿ: ರಾಜದ್ಯಲ್ಲಿ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತೆಗೆದುಕೊಂಡಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡ ಅನುಶ್ರೀ ಸೇರಿ ಇತರರ ಜೊತೆ ಕೆಲವು ಪ್ರಭಾವಿಗಳ ನಂಟು ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನನಗೆ ಆ ಬಗ್ಗೆ ಗೊತ್ತಿಲ್ಲಪ್ಪ ನಶೆ-ಪಶೆ ಎಲ್ಲಾ ಗೊತ್ತಿಲ್ಲ. ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ?, ಇವರೇನಾ ತಗೊಂಡಿರೋದು?, ಟಿವಿಯಲ್ಲಿ ಬರೀ ಸಿನಿಮಾ ಇಂಡಸ್ಟ್ರಿಯವರಲ್ಲಿರೋರನ್ನ ನೋಡಿ ಆಶ್ಚರ್ಯ ಆಗ್ತಿದೆ ಎಂದರು.
Advertisement
Advertisement
ಇದೇ ವೇಳೆ ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನು ಏನೂ ತೀರ್ಮಾನ ಮಾಡಲ್ಲ, ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದ್ದೇನೆ. ಅವರು ಎಲ್ಲರ ಜೊತೆ ಸಭೆ ಮಾಡಿ ಶಿಫಾರಸು ಮಾಡ್ತಾರೆ. ನಾನು, ನನ್ನ ಶಾಸಕಾಂಗ ಪಕ್ಷದ ನಾಯಕರು, ವಿಪಕ್ಷ ನಾಯಕರು ಕುಳಿತು ಚರ್ಚೆ ಮಾಡ್ತೇವೆ ಎಂದರು.
Advertisement
Advertisement
ಆರ್.ಆರ್.ನಗರ ಕ್ಷೇತ್ರದಲ್ಲಿ ದಿವಂಗತ ಡಿ.ಕೆ ರವಿ ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಕೆಲವರು ಶಿಫಾರಸು ಮಾಡ್ತಿದ್ದಾರೆ. ಕೆಲವು ಹಿರಿಯ ನಾಯಕರು ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದಾರೆ. ಅವರ ತಂದೆಯವರು ಏನೋ ನಮ್ಮ ಪಕ್ಷ ಬಿಟ್ಟು ಹೋಗಿದ್ರು, ಮಗಳದ್ದು ಪಾಪ ಏನಿದೆ. ಕೆಲವರು ಸಲಹೆ ಕೊಡ್ತಿದ್ದಾರೆ, ನಾನು ಇನ್ನೂ ಈ ಬಗ್ಗೆ ಚರ್ಚೆ ನಡೆಸಿಲ್ಲ. ಏಳೆಂಟು ಜನ ಆಕಾಂಕ್ಷಿಗಳು ಇದ್ದಾರೆ, ಬಾಲಕೃಷ್ಣ, ಎಂ. ಶ್ರೀನಿವಾಸ್ ಬಾಬು ಇದ್ದಾರೆ. ನಮ್ಮ ಡಿಸಿಸಿ ಪ್ರೆಸಿಡೆಂಟ್ ಸೇರಿ ಹಲವು ಜನರು ಇದ್ದಾರೆ ಎಂದು ಹೇಳಿದರು.
ಮುನಿರತ್ನಗೆ ಬಿಜೆಪಿ ಟಿಕೆಟ್ ನೀಡದೇ ಇದ್ರೆ ಕಾಂಗ್ರೆಸ್ ಸೇರಿಸಿಕೊಳ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಪಾರ್ಟಿಗೆ ಯಾರ ಬೇಕಾದರೂ ಅರ್ಜಿ ಕೊಡಬಹುದು. ಅರ್ಜಿಗಳೆಲ್ಲವೂ ಬರಲಿ, ಆಮೇಲೆ ಕುಳಿತುಕೊಂಡು ಮಾತನಾಡೋಣ. ಶಿರಾ ಕ್ಷೇತ್ರದಲ್ಲಿ ಎಲ್ಲರೂ ಸೇರಿ ಒಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಅವರು ಕಳಿಸಿದ ಅಭ್ಯರ್ಥಿಯನ್ನು ದೆಹಲಿಗೆ ಶಿಫಾರಸು ಮಾಡುವೆ. ಬೆಳಗಾವಿ ಲೋಕಸಭಾ ಅಭ್ಯರ್ಥಿ ವಿಚಾರ ಬಗ್ಗೆ ನನಗೇನೂ ಗೊತ್ತಿಲ್ಲ. ಫಸ್ಟ್ ಪಾರ್ಟಿ ಕಟ್ಟುವ ಕೆಲಸ, ಪಕ್ಷ ಸಂಘಟನೆ ಮಾಡಲು ಒತ್ತು. ವ್ಯಕ್ತಿ ಮೇಲೆ ನೆಕ್ಸ್ಟ್ ವಿಚಾರ, ಪಾರ್ಟಿ ಫಸ್ಟ್ ಎಂದು ತಿಳಿಸಿದರು.
ಇದೇ ವೇಳೆ ಯಾವಾಗ ಬೇಕಾದರೂ ಸರ್ಕಾರ ಬೀಳಬಹುದು ಎಂಬ ಸಚಿವ ಆನಂದ್ ಸಿಂಗ್ ಹೇಳಿಕೆ ಕುರಿತು ಮಾತನಾಡಿ, ಅವರು ಹೇಳ್ತಾರೋ, ಬೆಳಗಾವಿಯ ಕೆಲವರು ಹೇಳ್ತಾರೋ ಯಾರ್ಯಾರೋ ಏನೇನೋ ಹೇಳ್ತಾರೆ. ಅದಕ್ಕೆಲ್ಲ ನಾನೇಕೆ ರಿಯ್ಯಾಕ್ಟ್ ಮಾಡಬೇಕು?, ಭದ್ರವಾಗಿ ಇರ್ತಿವಿ, ಬಿಗಿಯಾಗಿ ಇರ್ತೀವಿ ಆರು ತಿಂಗಳ ಇರ್ತೀವಿ, 150 ಜನ ಇದೀವಿ, ಇನ್ನೂ ಹತ್ತು ವರ್ಷ ಇರ್ತೀವಿ ಅಂತ ಬಿಎಸ್‍ವೈ ಹೇಳ್ತಾರೆ, ಅದಕ್ಕೆಲ್ಲ ನಾನೇಕೆ ರಿಯ್ಯಾಕ್ಟ್ ಮಾಡಲಿ ಎಂದು ಹೇಳಿದರು.