– ನಿವೃತ್ತಿ ವೈಯಕ್ತಿಕ ವಿಚಾರ, ವಯಸ್ಸು ಕೇವಲ ಅಂಕೆಯಷ್ಟೆ
ನವದೆಹಲಿ: ಎಂಎಸ್ ಧೋನಿ ಅವರು ಫಿಟ್ ಆಗಿ ಇದ್ದರೆ ಅವರು ಭಾರತಕ್ಕಾಗಿ ಆಡಿ ಪಂದ್ಯವನ್ನು ಗೆಲ್ಲಿಸಿಕೊಡಲಿ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಸಂಸದ ಗೌತಮ್ ಗಂಭೀರ್ ಅವರು ಹೇಳಿದ್ದಾರೆ.
2019ರ ವಿಶ್ವಕಪ್ ನಂತರ ಭಾರತದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಧೋನಿಯವರು ಕ್ರಿಕೆಟ್‍ನಿಂದ ದೂರ ಉಳಿಸಿದ್ದಾರೆ. ಈ ನಡುವೆ ಅವರ ನಿವೃತ್ತಿ ವಿಚಾರದ ಬಗ್ಗೆ ಹಲವಾರು ಉಹಾಪೋಹಗಳು ಹರಿದಾಡುತ್ತಿವೆ. ಈಗ ಈ ವಿಚಾರವಾಗಿ ಮಾತನಾಡಿರುವ ಗಂಭೀರ್, ನಿವೃತ್ತಿ ಎಂಬುದು ಆಟಗಾರರ ವೈಯಕ್ತಿಕ ವಿಚಾರ. ಅದನ್ನು ಯಾರು ಪ್ರಶ್ನೆ ಮಾಡಬಾರದು ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಖಾಸಗಿ ಕ್ರೀಡಾ ಮಾಧ್ಯಮದಲ್ಲಿ ಮಾತನಾಡಿರುವ ಗಂಭೀರ್, ನೀವು ಒಳ್ಳೆಯ ಲಯದಲ್ಲಿ ಇದ್ದೀರಾ, ಚೆನ್ನಾಗಿ ಬಾಲ್ ಅನ್ನು ದಂಡಿಸುತ್ತೀರಾ ಎಂದರೆ ವಯಸ್ಸು ಎಂಬುದು ಕೇವಲ ನಂಬರ್ ಅಷ್ಟೆ. ಧೋನಿಯವರು ಇನ್ನೂ ಉತ್ತಮ ಲಯದಲ್ಲಿ ಇದ್ದು, ಅವರಿಗೆ ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ದೇಶಕ್ಕಾಗಿ ಪಂದ್ಯಗನ್ನು ಗೆಲ್ಲಿಸಿಕೊಡುವ ಶಕ್ತಿ ಇದ್ದರೆ ಅವರು ಇನ್ನೂ ಕ್ರಿಕೆಟ್ ಆಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಧೋನಿ ಈಗಲೂ ಕ್ರಿಕೆಟ್ ಆಡಲು ಫಿಟ್ ಆಗಿದ್ದರೆ, ಒಳ್ಳೆಯ ಫಾರ್ಮ್‍ನಲ್ಲಿ ಇದ್ದರೆ ಕ್ರಿಕೆಟ್ ಆಡಬಹುದು. ಯಾರಿಗೂ ಕೂಡ ಆಟಗಾರರನ್ನು ನಿವೃತ್ತಿ ಪಡೆದುಕೊಳ್ಳಿ ಎಂದು ಒತ್ತಾಯ ಮಾಡುವ ಅಧಿಕಾರವಿಲ್ಲ. ಎಂಎಸ್ ಧೋನಿಯಂತಹ ಆಟಗಾರರಿಗೆ ಒತ್ತಡ ಬರುವುದು ಸಹಜ. ಕ್ರಿಕೆಟ್ ಆಡಬೇಕು ಎಂದು ನಾವು ವೈಯಕ್ತಿಕವಾಗಿ ನಿರ್ಧಾರ ಮಾಡಿರುತ್ತೇವೆ. ಹಾಗೆಯೇ ನಿವೃತ್ತಿಯನ್ನು ಕೂಡ ನಾವು ವೈಯಕ್ತಿವಾಗಿ ಪಡೆದುಕೊಳ್ಳಬೇಕು ಎಂದು ಗಂಭೀರ್ ತಿಳಿಸಿದ್ದಾರೆ.
ಧೋನಿ ಅವರು 2019ರ ವಿಶ್ವಕಪ್ ಸೆಮಿಫೈನಲ್‍ನಲ್ಲಿ ಕೊನೆ ಬಾರಿಗೆ ಬ್ಯಾಟ್ ಬೀಸಿದ್ದರು. ಇದಾದ ನಂತರ ಅವರು ಕ್ರಿಕೆಟ್‍ನಿಂದ ದೂರು ಉಳಿದಿದ್ದಾರೆ. ಈ ಮಧ್ಯೆ ಅವರು ಭಾರತೀಯ ಸೇನೆಯಲ್ಲಿ ಸೇವೆ ಕೂಡ ಸಲ್ಲಿಸಿದ್ದರು. ನಂತರ ಚೆನ್ನೈಗೆ ಬಂದ ಧೋನಿ ಐಪಿಎಲ್-2020ರಲ್ಲಿ ಆಡಲು ತಯಾರಿ ನಡೆಸಿದ್ದರು. ಆದರೆ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಟೂರ್ನಿ ಮುಂದಕ್ಕೆ ಹೋಗಿತ್ತು. ಈಗ ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಿಲಿದ್ದು, ಧೋನಿಯವರನ್ನು ಮೈದಾನದಲ್ಲಿ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ಇದರ ನಡುವೆ ಎಂಎಸ್ ಧೋನಿಯವರ ನಿವೃತ್ತಿಯ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೆಲ ಮಾಜಿ ಆಟಗಾರರು ಮತ್ತು ಕ್ರಿಕೆಟ್ ಪಂಡಿತರ ಧೋನಿ ರಾಷ್ಟ್ರೀಯ ತಂಡಕ್ಕೆ ಮರಳುವುದು ಸಾಧ್ಯವಿಲ್ಲ. ಈಗಾಗಲೇ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಕೆಎಲ್ ರಾಹುಲ್ ಉತ್ತಮ ಲಯದಲ್ಲಿ ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.