– ತಂದೆಯ ಸಂಸ್ಕಾರ ಮುಂದೆ ಬಾರದ ಪುರುಷರು
ಕಾರವಾರ: ಹೆಣ್ಣು ಎಂದ ಕೂಡಲೇ ಸಮಾಜದಲ್ಲಿನ ಕಣ್ಣುಗಳು ನೋಡುವ ರೀತಿಗಳೇ ಬೇರೆಯಾಗಿವೆ. ಅದ್ರಲ್ಲೂ ಧಾರ್ಮಿಕ ಕ್ಷೇತ್ರದಲ್ಲಿ ಭಾಗಿಯಾಗುವ ಕಾರ್ಯಗಳಲ್ಲಿ ಇಂದಿಗೂ ಕೂಡ ಅಸಮಾನತೆಗಳಿವೆ. ಆದರೆ ಇಂದಿನ ದಿನಗಳಲ್ಲಿ ಹೆಣ್ಣಿನ ಸ್ಥಾನಗಳು ಕೂಡ ಬದಲಾಗಿದ್ದು, ಗಂಡಿಗೆ ಸಮನಾಗಿ ತಾನಿದ್ದೇನೆ ಎಂಬುದನ್ನು ಅದೆಷ್ಟೋ ಬಾರಿ ಮಹಿಳೆ ತೋರಿಸಿಕೊಟ್ಟಿದ್ದಾರೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂತಹದೊಂದು ಬದಲಾವಣೆ ಪ್ರತಿ ದಿನ ನೋಡುವ ಧಾರಾವಾಹಿಯಿಂದ ಬದಲಾಗಿದೆ. ಸಮಾಜ ಕೂಡ ಮಾನ್ಯ ಮಾಡಿದೆ. ಕಾರವಾರ ತಾಲುಕಿನ ಮಲ್ಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆ ಊರಿನಲ್ಲಿ ವಾಸವಾಗಿರುವ ಚಂದ್ರಕಾಂತ್ ಬುದೊ ಎಂಬವರು ತಮಗೆ ಗಂಡು ಮಗು ಬೇಕು ಎಂದು ಒಂಬತ್ತು ಹೆಣ್ಣು ಮಕ್ಕಳಾದರು.
ಕೊನೆಗೂ ಅವರಿಗೆ ಗಂಡುಮಗು ಆಗಲಿಲ್ಲ. ಆದರೂ ಮಕ್ಕಳನ್ನು ಚೆನ್ನಾಗಿ ಸಾಕಿ ಮೂರು ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡಿದ್ದರು. ದೃರಾದೃಷ್ಟವಶಾತ್ ಶುಕ್ರವಾರ ಹೃದಯಾಘಾತ ದಿಂದ ಕೊನೆಯುಸಿರೆಳೆದಿದ್ದಾರೆ. ಆದ್ರೆ ಇವರ ಕರ್ಮಾಂಗ ಮಾಡಲು ಗಂಡುಮಕ್ಕಳು ಮಾತ್ರ ಅರ್ಹರಾಗಿದ್ದರಿಂದ, ಯಾರೂ ಇರಲಿಲ್ಲ. ಮಗನ ಸ್ಥಾನದಲ್ಲಿ ನಿಂತು ಅಳಿಯರಾಗಲಿ, ರಕ್ತ ಸಂಬಂಧಿಗಳಾಗಲಿ ಶಾಸ್ತ್ರದ ನೆಪದಲ್ಲಿ ಮಾಡಲಿಲ್ಲ. ಆದ್ರೆ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಲೇ ಬೇಕಿತ್ತು.
ಆಗ ನೆನಪಾಗಿರುವುದೇ ಖಾಸಗಿ ವಾಹಿನಿಯಲ್ಲಿ ಬರುವ ಕನ್ನಡತಿ ಧಾರಾವಾಹಿಯಲ್ಲಿನ ಪ್ರಮುಖ ಪಾತ್ರದಾರಿ ಭುವನೇಶ್ವರಿ, ತಾನು ಹೆಣ್ಣಾಗಿಯೂ ತಂದೆಯ ಕರ್ಮಾಧಿಗಳನ್ನು ಮಾಡಿದ್ದರು. ಈ ರೀತಿಯ ಧಾರ್ಮಿಕ ಸುಧಾರಣೆಯ ಪ್ರೇರಣೆಯೇ ಚಿತೆಯ ಮೇಲಿದ್ದ ಚಂದ್ರಕಾಂತ್ (57) ರವರ ಶವದ ಕರ್ಮಾಂಗ ಮಾಡಲು ಇವರ ನಾಲ್ಕನೇ ಪುತ್ರಿ ಕುಮಾರಿ ಸರೋಜಾ ಮುಂದೆ ಬಂದಿದ್ದಾರೆ.
ತಾನು ಹೆಣ್ಣಾದರೇನು ಅವರು ನನ್ನ ತಂದೆ ಎಂಬ ಕರುಳಿನ ಪ್ರೀತಿ ಕರ್ಮ ಸಂಸ್ಕಾರಕ್ಕೆ ನಾಂದಿಯಾಯಿತು. ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಸಮಾಜಗಳಲ್ಲಿ ಬದಲಾವಣೆ ತರುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಗಂಡು ಗಂಡು ಎಂದು ಭ್ರಮೆಯ ಲೋಕದಲ್ಲಿರುವವರಿಗೆ ಇಂದಿನ ಈ ಘಟನೆ ಮಾದರಿಯಾಗಿದೆ.