ಉಡುಪಿ: ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುತ್ತದೆ ಎಂದು ಮುನ್ಸೂಚನೆ ಕೊಟ್ಟಿತ್ತು. ಎರಡು ದಿನ ಸುಮಾರು ಎಪ್ಪತ್ತು ಮಿಲಿಮೀಟರ್ ಮತ್ತು ಎರಡು ದಿನ 120 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ. ಎರಡು ದಿನವನ್ನು ಯೆಲ್ಲೋ ಎಂದು ಮತ್ತೆರಡು ದಿನವನ್ನು ಆರೆಂಜ್ ಅಲರ್ಟ್ ಎಂದು ಹವಾಮಾನ ಇಲಾಖೆ ಗೊತ್ತು ಮಾಡಿದೆ. ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವವರಿಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.
ಕಡಲ ತೀರ ಪ್ರದೇಶದಲ್ಲಿ ಭಾರೀ ಗಾಳಿ ಮಳೆ ಸುರಿದಿದೆ. ಉಡುಪಿಯಲ್ಲಿ ನಾಲ್ಕು ದಿನಗಳ ಕಾಲ ಸುಮಾರು 400 ಮಿಲಿಮೀಟರ್ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ. ನದಿಗಳಲ್ಲಿ ನಾಡದೋಣಿ ಮೀನುಗಾರಿಕೆ ಮಾಡುವವರು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಉಲ್ಲೇಖಿಸಲಾಗಿದೆ.
ಜಿಲ್ಲೆಯ ಎಲ್ಲ ಬಂದರುಗಳಿಗೆ ಮೀನುಗಾರಿಕಾ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆ ಆಗಲಿದ್ದು, ನದಿ ತೀರದ ಜನ ಎಚ್ಚರಿಕೆಯಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಮುದ್ರ ತೀರಕ್ಕೆ ಹೋಗಬಾರದು. ನದಿ ತೀರಕ್ಕೆ ಸಾರ್ವಜನಿಕರು, ಮಕ್ಕಳು ತೆರಳಬಾರದು ಎಂದು ಖಡಕ್ ಸೂಚನೆ ಕೊಡಲಾಗಿದೆ.