ಧಾರವಾಡ: ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೂ ಕೊರೊನಾ ಕಂಟಕ ಎದುರಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವ ಎಎಸ್‍ಐಗೆ ಸೋಂಕು ತಗುಲಿದೆ.
ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಎಸ್‍ಪಿ ಕಚೇರಿಯಲ್ಲಿ ಕೆಲಸ ಮಾಡುವ ಎಎಸ್‍ಐಗೆ ಕೊರೊನಾ ಸೋಂಕು ತಗುಲಿದ್ದು, ಇದರಿಂದ ಇಡೀ ಎಸ್‍ಪಿ ಕಚೇರಿಯೇ ತಲ್ಲಣಗೊಂಡಿದೆ. ಎಎಸ್‍ಐಗೆ ಸೋಂಕು ತಗುಲಿದೆ ಎಂದು ತಿಳಿದ ತಕ್ಷಣ ಧಾರವಾಡ ಎಸ್‍ಪಿ ವರ್ತಿಕಾ ಕಟಿಯಾರ್ ಕಚೇರಿಯ ಸಿಬ್ಬಂದಿಗೆ ಎರಡು ದಿನಗಳ ಕಾಲ ಕಚೇರಿಯ ಬಳಿ ಸುಳಿಯದಂತೆ ಸೂಚನೆ ನೀಡಿದ್ದಾರೆ.
ಎಸ್‍ಪಿ ಕಚೇರಿಯಲ್ಲಿರುವ ಪೊಲೀಸ್ ಕಂಟ್ರೋಲ್ ರೂಮಿನ ಇಬ್ಬರು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ. ಇವರನ್ನು ಹೊರತು ಪಡಿಸಿ ಕಚೇರಿಯ ಸಿಬ್ಬಂದಿ ಕೆಲಸದ ಮೇಲೆ ಹೊರಗೆನೇ ಓಡಾಟ ನಡೆಸಿದ್ದಾರೆ. ಇನ್ನುಳಿದ ಮಹಿಳಾ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ. ಇದು ಎಸ್‍ಪಿ ಕಚೇರಿಯಲ್ಲಿ ನಡೆದಿದ್ದರೆ, ಮತ್ತೊಂದು ಕಡೆ ಧಾರವಾಡ ಶಹರ ಪೊಲೀಸ್ ಠಾಣೆಯ ಇಬ್ಬರು ಪೇದೆಗಳಿಗೆ ಸೋಂಕು ತಗುಲಿದೆ. ಕಳೆದ ವಾರವಷ್ಟೇ ಇದೇ ಶಹರ ಪೊಲೀಸ್ ಠಾಣೆಯ ಮಹಿಳಾ ಮುಖ್ಯ ಪೇದೆಗೆ ಕೊರೊನಾ ದೃಢ ಪಟ್ಟಿತ್ತು.