ಧಾರವಾಡ: ಇತ್ತೀಚೆಗಷ್ಟೆ ಹೊಲದಲ್ಲಿ ದೇವರ ಪೂಜೆಗೆ ತೆರಳಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೊಂದು ಅಪ್ರಾಪ್ತೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿಯ ಮನೆಗೆ ಕೇಂದ್ರ ಸಚಿವ ಜೋಶಿ ಭೇಟಿ
ಜಿಲ್ಲೆಯ ನವಲಗುಂದ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಬಾಲಕಿ ಮೇಲೆ ಅದೇ ಗ್ರಾಮದ 22 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ. ಅಪ್ರಾಪ್ತೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಯುವಕ ಆಕೆಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ.
ಅಷ್ಟೇ ಅಲ್ಲದೇ ಆರೋಪಿ ಅತ್ಯಾಚಾರ ಬಳಿಕ ಯಾರಿಗೂ ಈ ವಿಚಾರವನ್ನು ಹೇಳಬಾರದು ಎಂದು ಜೀವ ಬೆದರಿಕೆ ಹಾಕಿದ್ದನು. ಆದರೆ ಅಪ್ರಾಪ್ತೆ ನಡೆದ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದಳು. ತಕ್ಷಣ ಕುಟುಂಬದವರು ಧಾರವಾಡ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ಅಪ್ರಾಪ್ತೆ ಹೊಲದಲ್ಲಿನ ದೇವರಿಗೆ ಪೂಜೆ ಮಾಡಲು ತೆರಳಿದ್ದಳು. ಈ ವೇಳೆ ಗ್ರಾಮದ ಯುವಕ ಬೆದರಿಸಿ ಅತ್ಯಾಚಾರ ಮಾಡಿದ್ದನು. ಮರುದಿನ ಬಾಲಕಿ ತಾಯಿ ಬಳಿ ಹೊಲದಲ್ಲಿ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಹೇಳಿ ವಿಷ ಸೇವಿಸಿದ್ದಳು. ಕೂಡಲೇ ಕುಟುಂಬಸ್ಥರು ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 2ರಂದು ಸಾವನ್ನಪ್ಪಿದ್ದಳು.