ಮೈಸೂರು: ಒಂದು ದೇಶವನ್ನ ಹಾಳು ಮಾಡಬೇಕಾದರೆ ಬಾಂಬ್ ಹಾಕಬೇಕಿಲ್ಲ. ಆ ದೇಶದ ಯುವಕರನ್ನ ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ಭಯೋತ್ಪಾದನೆಯ ಒಂದು ಭಾಗವಾಗಿದೆ. ಒಂದು ದೇಶವನ್ನ ಹಾಳು ಮಾಡಬೇಕಾದರೆ ಬಾಂಬ್ ಹಾಕಬೇಕಿಲ್ಲ. ಆ ದೇಶದ ಯುವಕರನ್ನ ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು. ಅವರ ಮುಂದಿನ ಪೀಳಿಗೆ ಸೇರಿ ಇಡೀ ಕುಟುಂಬವನ್ನ ಸರ್ವನಾಶವಾಗಿಸಿ ಬಿಡುತ್ತದೆ. ಈ ದಂಧೆ ಕೇವಲ ಸ್ಯಾಂಡಲ್‍ವುಡ್ ಬಾಲಿವುಡ್ ಅಷ್ಟೇ ಸೀಮಿತವಾಗಿಲ್ಲ. ಎಲ್ಲ ಕಡೆ ಡ್ರಗ್ಸ್ ಹಾಗೂ ಗಾಂಜಾ ಸಿಗುತ್ತಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಈ ಘಟನೆಯನ್ನ ಎಚ್ಚರಿಕೆ ಪಾಠವಾಗಿ ಭಾವಿಸಿ ಡ್ರಗ್ಸ್ ನಿರ್ನಾಮ ಮಾಡಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ. ಯಾವ ದೇಶದ ಯಾವ ಪೆಡ್ಲರ್‌ಗಳು ಇದ್ದಾರೆ ಅವರೆಲ್ಲರನ್ನ ಬಂಧಿಸಬೇಕು. ಡ್ರಗ್ಸ್ ಬಗ್ಗೆ ಮಾಹಿತಿ ಇರುವವರು ಮಾಹಿತಿ ಕೊಡಿ. ಎಲ್ಲ ಕಡೆ ರೇಡ್ ಆಗಲಿ, ಡ್ರಗ್ಸ್ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕು. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಗೃಹಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.
ಆಧಾರ ರಹಿತ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಯಾರಾದರೂ ಒಂದು ವಿಷಯದ ಬಗ್ಗೆ ಮಾತನಾಡಬೇಕು ಎಂದರೆ ಅದಕ್ಕೆ ಸಾಕ್ಷಿ, ಆಧಾರ ಇರಬೇಕು ಎಂದು ಹೆಚ್‍ಡಿಕೆ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಡ್ರಗ್ಸ್, ಗಾಂಜಾ ಸಾಮಾನ್ಯವಾಗಿ ಬಳಕೆಯಲ್ಲಿರುವ ಪದಗಳಾಗಿವೆ. ಯಾಕೆಂದರೆ ಡ್ರಗ್ಸ್‌ನಿಂದ ವಾಸನೆ ಬರಲ್ಲ, ಹೀಗಾಗಿ ಯಾರು ಸೇವನೆ ಮಾಡಿದ್ದಾರೆ ಎಂಬುದು ಗೊತ್ತಾಗಲ್ಲ. ಮದ್ಯ ಸೇವನೆ ಮಾಡಿದರು ತೂರಾಡುತ್ತಾರೆ. ಅದರಿಂದ ಅವರನ್ನು ನೋಡಿದರೆ ಕುಡಿದಿರುವುದು ಗೊತ್ತಾಗುತ್ತೆ ಅಥವಾ ವಾಸನೆಯಿಂದ ಗೊತ್ತಾಗುತ್ತದೆ. ಆದರೆ ಡ್ರಗ್ಸ್ ಯಾರು ಸೇವಿಸಿದ್ದಾರೆ ಎಂಬುದು ಗೊತ್ತಾಗುವುದಿಲ್ಲ.ಇದೊಂದು ಸಮಾಜಕ್ಕೆ ಪಿಡುಗಾಗಿರುವುದರಿಂದ ನಮ್ಮೆಲ್ಲರ ಜವಾಬ್ದಾರಿ ಇದೆ. ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.