ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ನೋಡ ನೋಡುತ್ತಿದ್ದಂತೆ ಸೋಂಕಿತರ ಪ್ರಮಾಣ ಗಣನೀಯ ಏರಿಕೆ ಕಾಣ್ತಿದೆ. ಸಣ್ಣದಾಗಿ ಶುರುವಾದ ಕೊರೊನಾ ಸೋಂಕು ಈಗ ಭಾರತವನ್ನ ವಿಶ್ವದ ಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿ ತಂದು ನಿಲ್ಲಿಸಿದೆ.
ಫೆಬ್ರವರಿ ಆರಂಭದಲ್ಲಿ ದೇಶದಲ್ಲಿ ಶುರುವಾದ ಕೊರೊನಾ ಸೋಂಕು ಈ ಪ್ರಮಾಣ ಹಾನಿ ಮಾಡಲಿದೆ ಎಂದು ಯಾರೂ ಊಹಿಸಿರಲಿಲ್ಲ. ನಾಲ್ಕು ತಿಂಗಳ ಅವಧಿಯಲ್ಲಿ ನೋಡ ನೋಡುತ್ತಿದ್ದಂತೆಯೇ ಕೊರೊನಾ ಲಕ್ಷದ ಗಡಿ ದಾಟಿ ಅಬ್ಬರಿಸುತ್ತಿದೆ. ಪ್ರತಿದಿನಕ್ಕೆ ಐದಾರು ಸಾವಿರ ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಳ್ತಿದೆ.
ಹೀಗೆ ದೇಶದಲ್ಲಿ ಹೆಚ್ಚಾಗ್ತಿರುವ ಸೋಂಕಿನ ಪ್ರಮಾಣ, ವಿಶ್ವದ ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತವೂ ಅಗ್ರಸ್ಥಾನ ಪಡೆಯುವತ್ತ ಹೊರಟಿದೆ. ಮೊನ್ನೆಯಷ್ಟೇ 82,974 ಪ್ರಕರಣಗಳು ಪತ್ತೆಯಾಗುವ ಮೂಲಕ ಚೀನಾ ದಾಖಲೆ ಮುರಿದಿದ್ದ ಭಾರತ ಒಂದೂವರೆ ಲಕ್ಷ ಮಂದಿಯಲ್ಲಿ ಸೋಂಕು ಸೇರಿ ಪೇರು ದೇಶದ ದಾಖಲೆ ಮುರಿದಿತ್ತು. ಸದ್ಯ ವಿಶ್ವದ ಟಾಪ್ 11 ಸ್ಥಾನದಲ್ಲಿರುವ ಭಾರತ ಇಂದು ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಬಳಿಕ ವಿಶ್ವದ ಟಾಪ್ ಟೆನ್ ಕೊರೊನಾ ಪೀಡಿತ ರಾಷ್ಟ್ರಗಳ ಪಟ್ಟಿ ಸೇರುವುದು ಖಚಿತವಾಗಿದೆ. ಇದನ್ನೂ ಓದಿ: ಚೀನಾವನ್ನು ಹಿಂದಿಕ್ಕಿದ ಭಾರತ – 85 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ
ಸದ್ಯ ವಿಶ್ವದ ಯಾವ ದೇಶಗಳಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಳ್ತಿದೆ?:
ಅಮೆರಿಕದಲ್ಲಿ ಸರಿಸುಮಾರು 16 ಲಕ್ಷ ಸೋಂಕಿತರಿದ್ದರೆ ಇದರಲ್ಲಿ 98,740 ಜನ ಸಾವನ್ನಪ್ಪಿದ್ದಾರೆ. ಬ್ರೆಜಿಲ್‍ನಲ್ಲಿ 3 ಲಕ್ಷದ 49 ಸಾವಿರ, ರಷ್ಯಾ 3 ಲಕ್ಷದ 44 ಸಾವಿರ, ಸ್ಪೇನ್‍ನಲ್ಲಿ 2 ಲಕ್ಷದ 82 ಸಾವಿರ, ಯುಕೆಯಲ್ಲಿ 2 ಲಕ್ಷದ 57 ಸಾವಿರ, ಇಟಲಿಯಲ್ಲಿ 2 ಲಕ್ಷದ 29 ಸಾವಿರ ಕೊರೊನಾ ಬಾಧಿತರಾಗಿದ್ದಾರೆ. ಫ್ರಾನ್ಸ್‍ನಲ್ಲಿ 1 ಲಕ್ಷದ 82 ಸಾವಿರ ಮಂದಿ, ಜರ್ಮನಿಯಲ್ಲಿ 1 ಲಕ್ಷದ 80 ಸಾವಿರ, ಟರ್ಕಿ 1 ಲಕ್ಷದ 55 ಸಾವಿರ ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ. ಇರಾನ್‍ನಲ್ಲಿ 1 ಲಕ್ಷದ 35 ಸಾವಿರದ 701 ಮಂದಿ ಸೋಂಕಿಗೆ ತುತ್ತಾಗಿದ್ದರೆ, ಭಾರತ ಅದರ ನಂತರದ ಅಂದ್ರೆ 1 ಲಕ್ಷದ 33 ಸಾವಿರ 725 ಮಂದಿ ಸೋಂಕು ಪೀಡಿತರಾಗಿದ್ದಾರೆ.
ಮೇ ಅಂತ್ಯಕ್ಕೆ ಟಾಪ್-5ನಲ್ಲಿ ಭಾರತ..?:
ಭಾರತ ಸದ್ಯ 11ನೇ ಸ್ಥಾನದಲ್ಲಿದೆ ಹತ್ತನೇ ಸ್ಥಾನದಲ್ಲಿರುವ ಇರಾನ್ ಹಾಗೂ ಭಾರತಕ್ಕೂ ಎರಡು ಸಾವಿರ ಸೋಂಕಿತರ ಅಂತರವಿದ್ದು ಇಂದು ಬೆಳಗ್ಗಿನ ಹೆಲ್ತ್ ಬುಲೆಟಿನ್ ವೇಳೆಗೆ ಭಾರತ ಇರಾನ್ ಹಿಂದಿಕ್ಕಿ ಹತ್ತನೇ ಸ್ಥಾನಕ್ಕೆ ಬರಲಿದ್ದು ಅಲ್ಲಿಗೆ ವಿಶ್ವದ ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳ ಟಾಪ್ ಪಟ್ಟಿಯಲ್ಲಿ ಭಾರತ 10ನೇ ಸ್ಥಾನ ಪಡೆಯಲಿದೆ. ತಜ್ಞರು ಹೇಳುವ ಪ್ರಕಾರ ಇದು ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ದಿನವೊಂದಕ್ಕೆ ಆರು ಸಾವಿರ ಪ್ರಕರಣಗಳು ಭಾರತದಲ್ಲಿ ಸದ್ಯ ಪತ್ತೆಯಾಗುತ್ತಿದ್ದು, ಹೀಗೆ ಮುಂದುವರಿದ್ರೆ ಮೇ ಅಂತ್ಯದ ವೇಳೆಗೆ ಟಾಪ್ 5 ಸ್ಥಾನದಲ್ಲಿರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.