ಗಾಂಧೀನಗರ: ದೇವರಿಗೆ ಅತೀ ಹೆಚ್ಚು ಭಕ್ತಿಯಿಂದ ಭಕ್ತರು ಹಣ್ಣುಕಾಯಿ ನೈವೇದ್ಯ ಹಾಲು ಸಮರ್ಪಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ದೇವಾಲಯದಲ್ಲಿ ಭಕ್ತರು ಏಡಿಯನ್ನು ದೇವರಿಗೆ ಅರ್ಪಿಸುತ್ತಿದ್ದಾರೆ.
Advertisement
ಹೌದು. ಗುಜರಾತ್‍ನ ಸೂರತ್ ಜಿಲ್ಲೆಯ ಉಮ್ರ ಗ್ರಾಮದಲ್ಲಿರುವ ರಾಮನಾಥ ಶಿವ ಘೇಲಾ ದೇವಸ್ಥಾನದಲ್ಲಿ ಭಕ್ತರು ಏಡಿಯನ್ನು ಸಮರ್ಪಿಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಏಡಿಯೇ ಇಲ್ಲಿನ ದೇವರಿಗೆ ಪ್ರಿಯವಂತೆ. ಹಾಗಾಗಿ ದೇವರಿಗೆ ಏಡಿಯನ್ನು ಸಮರ್ಪಿಸಿ ಭಕ್ತರು ಭಕ್ತಿಯಲ್ಲಿ ಮಿಂದೆದ್ದಿದ್ದಾರೆ.
Advertisement
Advertisement
Advertisement
ದೇವರಿಗೆ ಏಡಿ ಅರ್ಪಿಸುವುದು ಇದೇ ಮೊದಲಲ್ಲ. ಏಡಿಯನ್ನು ದೇವರಿಗೆ ಸಮರ್ಪಿಸುವ ಸಂಪ್ರದಾಯ ಹಿಂದಿನಿಂದಲೂ ಬೆಳೆದು ಬಂದಿದೆ. ಮಕರ ಸಂಕ್ರಾಂತಿಯ ದಿನ ಶಿವಲಿಂಗಕ್ಕೆ ಜೀವಂತ ಏಡಿಯನ್ನು ಅರ್ಪಿಸುವ ಪ್ರತೀತಿ ಬೆಳೆದು ಬಂದಿರುವ ಕಾರಣ ಈ ಬಾರಿಯೂ ನೂರಾರು ಭಕ್ತರು ಬಂದು ಏಡಿಗಳನ್ನು ದೇವರಿಗೆ ಸಮರ್ಪಿಸಿ ಭಕ್ತಿ ಮೆರೆದಿದ್ದಾರೆ.
ಇಲ್ಲಿರುವ ರಾಮನಾಥ ಶಿವ ಘೇಲಾ ದೇವಸ್ಥಾನಕ್ಕೆ ಸಂಕ್ರಾಂತಿ ದಿನ ವಿಶೇಷ ಏಡಿ ಸಮರ್ಪಿಸಿದರೆ ಒಳ್ಳೆಯದಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಈ ನಂಬಿಕೆ ಬರಲು ಕಾರಣ ಇಲ್ಲಿರುವ ಶಿವಲಿಂಗವನ್ನು ಸಾಕ್ಷಾತ್ ಶ್ರೀರಾಮನೇ ಪ್ರತಿಷ್ಠಾಪಿಸಿರುವುದಾಗಿ ಇರುವ ಪ್ರತೀತಿ. ಈ ಸ್ಥಳದ ಪುರಾಣ ಇತಿಹಾಸದ ಪ್ರಕಾರ ಒಂದು ಬಾರಿ ಸಾಗರದ ದಂಡೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀ ರಾಮನ ಪಾದದ ಮೇಲೆ ಏಡಿಗಳು ಬಂದು ಕುಳಿತಿದ್ದವಂತೆ. ಇದನ್ನು ಕಂಡ ಶ್ರೀರಾಮ ತುಂಬಾ ಸಂತೋಷವಾಗಿ ದೇವರ ಪೂಜೆಗಾಗಿ ಏಡಿಯನ್ನೇ ಸಮರ್ಪಿಸಿ ಮುಂದೆ ಯಾರು ಶಿವನಿಗೆ ಏಡಿಯನ್ನು ಸಮರ್ಪಿಸುತ್ತಾರೋ ಅವರಿಗೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂದು ವರ ಕೊಟ್ಟಿರುವುದಾಗಿ ನಂಬಲಾಗಿದೆ. ಹಾಗಾಗಿ ಭಕ್ತರು ಇಲ್ಲಿಗೆ ಏಡಿ ಸಮರ್ಪಿಸಿ ತಮ್ಮ ಕಷ್ಟಗಳನ್ನು ನಿವಾರಿಸುವಂತೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.