ಲಕ್ನೋ: ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ಪತ್ನಿ ಮತ್ತು ಆತನ ಮಗನನ್ನು ಉತ್ತರ ಪ್ರದೇಶದ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ವಿಕಾಸ್ ದುಬೆಯ ಪತ್ನಿ ರಿಚಾ ದುಬೆಯನ್ನು ಕೃಷ್ಣನಗರ ನಿವಾಸದಿಂದ ಗುರುವಾರ ಸಂಜೆ ವಿಶೇಷ ಕಾರ್ಯಪಡೆ ತಂಡ (ಎಸ್‍ಟಿಎಫ್) ಆರೋಪಿಗಳಿಗೆ ಆಶ್ರಯ ನೀಡಿದ ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರ ಜೊತೆಗೆ ವಿಕಾಸ್ ದುಬೆ ಮಗ ಮತ್ತು ಆತನ ಸಹಚರನೋರ್ವನನ್ನು ಬಂಧಿಸಲಾಗಿದೆ.
ಬಂಧಿತ ರಿಚಾ ದುಬೆ, ಗ್ಯಾಂಗ್ ಸ್ಟಾರ್ ನಡೆಸುತ್ತಿದ್ದ ಎಲ್ಲ ಕೃತ್ಯಗಳಿಗೂ ಸಾಥ್ ನೀಡುತ್ತಿದ್ದಳು ಎಂದು ತಿಳಿದು ಬಂದಿದೆ. ಕನ್ಪುರದಲ್ಲಿ ಪೊಲೀಸರನ್ನು ಕೊಂದ ಘಟನೆಯ ಬಗ್ಗೆ ಆಕೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆಯಲ್ಲಿ ಕನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಕೊಂದ ಕೃತ್ಯದಲ್ಲಿ ಈಕೆಯೂ ಕೂಡ ಭಾಗವಾಗಿದ್ದಳು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈಕೆ ಬಿಕ್ರು ಗ್ರಾಮದಲ್ಲಿದ್ದ ದುಬೆ ಮನೆಗೆ ಸಿಸಿಟಿವಿಯನ್ನು ಅಳವಡಿಸಿ ಅದರ ದೃಶ್ಯಗಳನ್ನು ತನ್ನ ಮೊಬೈಲ್ ಮೂಲಕ ಕೂತಲ್ಲಿಯೇ ನೋಡುತ್ತಿದ್ದಳು. ಆ ಮನೆಯನ್ನು ನಾಶ ಮಾಡಿದ ಅಧಿಕಾರಿಗಳು ಆಕೆಯನ್ನು ಹುಡುಕಿಕೊಂಡು ಕೃಷ್ಣನಗರ ನಿವಾಸಕ್ಕೆ ಹೋಗಿದ್ದಾರೆ. ಆದರೆ ಆಕೆ ಅಲ್ಲಿಂದ ಪರಾರಿಯಾಗಿದ್ದಳು. ಆದರೆ ವಿಕಾಸ್ ದುಬೆ ಗುರುವಾರ ಸಿಕ್ಕಿಬಿದ್ದ ನಂತರ ಮತ್ತೆ ಆದೇ ಮನೆಗೆ ವಾಪಸ್ ಆಗಿದ್ದಾಳೆ. ಆನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಈಕೆ ಕೂಡ ಸ್ಥಳೀಯ ಗ್ರಾಮ ಪಂಜಾಯ್ತಿ ಚುನಾವಣೆಗೆ ನಿಂತು ಗೆದ್ದಿದ್ದಳು. ಮೊದಲು ಬಿಜೆಪಿ ಪಕ್ಷದಲ್ಲಿ ಇದ್ದ ವಿಕಾಸ್ ದುಬೆ ನಂತರದ ದಿನದಲ್ಲಿ ಸಮಾಜವಾದಿ ಪಕ್ಷಕ್ಕೆ ಬಂದಿದ್ದ. ಈತನೂ ಕೂಡ ಜೈಲಿನಲ್ಲೇ ಇದ್ದುಕೊಂಡೆ ನಗರ ಪಂಚಾಯ್ತಿ ಚುನಾವಣೆಗೆ ನಿಂತು ಜಯಗಳಿಸಿದ್ದ. ಜೊತೆಗೆ ಎಂಎಲ್‍ಐ ಆಗಬೇಕು ಎಂಬ ಕನಸು ಕಂಡಿದ್ದ ದುಬೆ, ಇದಕ್ಕಾಗಿ 2000ದಲ್ಲಿ ಬಿಜೆಪಿ ಸಚಿವ ಸಂತೋಷ್ ಶುಕ್ಲಾ ಅವರನ್ನು ಪೊಲೀಸ್ ಠಾಣೆಯಲ್ಲೇ ಕೊಲೆ ಕೂಡ ಮಾಡಿದ್ದ.
ಜುಲೈ 2ರಂದು ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ದುಬೆ ಮತ್ತು ಅವನ ಗ್ಯಾಂಗ್ ನಾಪತ್ತೆಯಾಗಿತ್ತು. ವಿಕಾಸ್ ದುಬೆಗಾಗಿ ಉತ್ತರ ಪ್ರದೇಶದ ಪೊಲೀಸರು ನಿರಂತರ ಹುಡುಕಾಟ ನಡೆಸಿದ್ದರು. ಈ ಮಧ್ಯೆ ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ಸಿಕ್ಕ ವಿಕಾಸ್ ದುಬೆಯ ಏಳು ಮಂದಿ ಸಹಚರನ್ನು ಎನ್‍ಕೌಂಟರ್ ಮಾಡಿದ್ದರು. ಇದಾದ ಒಂದು ವಾರದ ನಂತರ ವಿಕಾಸ್ ದುಬೆ ಮಧ್ಯಪ್ರದೇಶದ ಉಜ್ಜೈನ್‍ನಲ್ಲಿರುವ ಮಹಾಕಾಲ ದೇವಸ್ಥಾನದಲ್ಲಿ ಗುರುವಾರ ಸೆರೆಸಿಕ್ಕಿದ್ದ.
ಗುರುವಾರ ಮಧ್ಯಪ್ರದೇಶದಲ್ಲಿ ಸೆರೆಸಿಕ್ಕ ವಿಕಾಸ್ ದುಬೆಯನ್ನು ಇಂದು ಮುಂಜಾನೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ಮಧ್ಯಪ್ರದೇಶದ ಪೊಲೀಸರಿಂದ ದುಬೆಯನ್ನು ವಶಕ್ಕೆ ಪಡೆದು ಕರೆತರುವ ಸಮಯದಲ್ಲಿ ನಮ್ಮ ವಾಹನ ಅಪಘಾತವಾಗಿ ಪಲ್ಟಿಯಾಗಿತ್ತು. ಈ ವೇಳೆ ದುಬೆ ತಮ್ಮ ಪೊಲೀಸರ ಬಂದೂಕನ್ನು ಕಿತ್ತುಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆತನನ್ನು ಎನ್‍ಕೌಂಟರ್ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.