ಹಾವೇರಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಹೋರಿ ಹಾಗೂ ಎಮ್ಮೆಗಳನ್ನು ಓಡಿಸುವ ಮೂಲಕ ರೈತರು ಸಂಭ್ರಮಿಸಿದ್ದಾರೆ.
Advertisement
ಜಿಲ್ಲೆಯ ಹಲವೆಡೆ ದೀಪಾವಳಿ ಪಾಡ್ಯದ ನಿಮಿತ್ಯ ಹೋರಿಗಳನ್ನು ಓಡಿಸಲಾಗಿದೆ. ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು, ಹಾನಗಲ್ ತಾಲೂಕಿನ ಮಲಗುಂದ ಸೇರಿದಂತೆ ಹಲವೆಡೆ ಹೋರಿಗಳನ್ನು ಓಡಿಸಿ ರೈತರು ಸಂಭ್ರಮಿಸಿದ್ದಾರೆ. ಅಲಂಕಾರ ಮಾಡಿದ ಹೋರಿಗಳನ್ನು ಗ್ರಾಮದ ರಸ್ತೆಗಳಲ್ಲಿ ಓಡಿಸಿ ರೈತರು ಸಂಭ್ರಮಿಸಿದ್ದಾರೆ. ಓಡುತ್ತಿರುವ ಹೋರಿಗಳನ್ನು ಹಿಡಿಯಲು ಯುವಕರು ಹರಸಾಹಸ ಪಡುತ್ತಿದ್ದರೆ, ನೆರೆದಿದ್ದ ಜನ ನೋಡಿ ಸಂತಸಪಟ್ಟಿದ್ದಾರೆ.
Advertisement
Advertisement
ಜನರು ಕೇಕೆ, ಶಿಳ್ಳೆ, ಚಪ್ಪಾಳೆಗಳ ಮೂಲಕ ಹೋರಿಗಳಿಗೆ ಹುರಿದುಂಬಿಸಿದ್ದು, ಕೊರೊನಾ ಭೀತಿ ನಡುವೆಯೂ ಎಲ್ಲವನ್ನು ಮರೆತು ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದ್ದಾರೆ. ಕೆಲವರು ಮಾಸ್ಕ್ ಧರಿಸಿದ್ದರೆ, ಬಹುತೇಕರು ಮಾಸ್ಕ್ ಧರಿಸದೆ ಹೋರಿ ಓಟ ನೋಡಿ ಖುಷಿಪಟ್ಟರು. ಸರ್ಕಾರ ಹೋರಿ ಓಟಕ್ಕೆ ಅನುಮತಿ ನಿರಾಕರಿಸಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿನ ಜನ ಪದ್ಧತಿಯನ್ನು ಬಿಡುತ್ತಿಲ್ಲ. ಸಾಂಕೇತಿಕವಾಗಿ ಹೋರಿ ಓಡಿಸಿ ಸಂಭ್ರಮಿಸುತ್ತಾರೆ.
Advertisement
ಹಾವೇರಿ ತಾಲೂಕಿನ ಗುತ್ತಲ ಪಟ್ಟಣದಲ್ಲಿ ಗೌಳಿ ಸಮುದಾಯದವರಿಂದ ಎಮ್ಮೆಗಳನ್ನು ಸಹ ಓಡಿಸಲಾಯಿತು. ಎಮ್ಮೆಗಳಿಗೆ ಮಾಡಿದ್ದ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು. ಅಲಂಕಾರಗೊಂಡ ಎಮ್ಮೆ ತನ್ನ ಮಾಲೀಕನ ಹಿಂದೆ ಓಡುತ್ತಿದ್ದರೆ, ಹಿಂದಿನಿಂದ ಯುವಕರು, ಮಕ್ಕಳ ಕೂಗಾಟ ಜೋರಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎಮ್ಮೆಗಳ ಓಟ ನೋಡಲು ಜನ ನೆರೆದಿದ್ದರು. ಕೇಕೆ ಹಾಕುವ ಮೂಲಕ ಗೌಳಿಗರ ಖುಷಿಯನ್ನ ಇಮ್ಮಡಿಗೊಳಿಸಿದರು.