ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ದೂರುದಾರ ದಿನೇಶ್ ಕಲ್ಲಹಳ್ಳಿ ಅವರಿಗೆ ಸಿಡಿ ಎಲ್ಲಿ ಸಿಕ್ಕಿದೆ ಎಂಬ ವಿಚಾರ ಈಗ ಪೊಲೀಸ್ ತನಿಖೆಯಿಂದ ಲಭ್ಯವಾಗಿದೆ.
ಮಾರ್ಚ್ 1 ರಂದು ದಿನೇಶ್ ಕಲ್ಲಹಳ್ಳಿ ಅವರಿಗೆ ಸಿಡಿ ಸಿಕ್ಕಿದೆ. ಬೆಂಗಳೂರಿನ ಗಾಂಧಿನಗರದ ರಾಮಕೃಷ್ಣ ಹೋಟೆಲಿನ ಪಾರ್ಕಿಂಗ್ ಜಾಗದಲ್ಲಿ ಸಂತ್ರಸ್ತ ಯುವತಿಯ ಸಂಬಂಧಿಕರು ದಿನೇಶ್ ಕಲ್ಲಹಳ್ಳಿಯವರಿಗೆ ನೀಡಿದ್ದಾರೆ. ಸಂಬಂಧಿಕರು ದಿನೇಶ್ ಅವರಿಗೆ ಸಿಡಿ ನೀಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಸಿಸಿಬಿ ಪೊಲೀಸರು ಹೋಟೆಲ್‌ಗೆ ಬಂದು ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೇ ಯಾರಿಗೂ ನೀಡಬಾರದು ಎಂದು ಸೂಚಿಸಿದ್ದಾರೆ.
ಪಬ್ಲಿಕ್ ಟಿವಿ ಸ್ಟಿಂಗ್‌ನಲ್ಲಿ ಹೋಟೆಲ್ ಮ್ಯಾನೇಜರ್ ಪ್ರತಿಕ್ರಿಯಿಸಿ, ನಮ್ಮ ಹೋಟೆಲಿಗೆ ಬಂದು ಸಿಡಿ ನೀಡಿದ್ದಾರೆ ಎಂಬ ವಿಚಾರ ಪೊಲೀಸರು ಬಂದ ನಂತರವಷ್ಟೇ ತಿಳಿಯಿತು. ನಮಗೆ ದಿನೇಶ್ ಕಲ್ಲಹಳ್ಳಿ ಯಾರು ಎಂಬುದೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ನಂತರ ದಿನೇಶ್ ಕಲ್ಲಹಳ್ಳಿ ಯಾರು ಎನ್ನುವುದು ಗೊತ್ತಾಗಿದೆ. ನಮ್ಮ ಹೋಟೆಲಿಗೆ ಪ್ರತಿನಿತ್ಯ ಹಲವು ಮಂದಿ ಬರುತ್ತಿರುತ್ತಾರೆ ಎಂದು ಹೇಳಿದರು.
ಸಿಸಿಟಿವಿ ದೃಶ್ಯ ತೋರಿಸಬಹುದೇ ಎಂದು ಕೇಳಿದ್ದಕ್ಕೆ ಮ್ಯಾನೇಜರ್, ಇಲ್ಲ ಯಾರಿಗೂ ನಾವು ನೀಡುವುದಿಲ್ಲ. ಪೊಲೀಸರು ಯಾರಿಗೂ ಕೊಡಬಾರದು ಎಂದೂ ಸೂಚಿಸಿದ್ದಾರೆ ಎಂದರು.
ಕೇವಲ ಕಬ್ಬನ್ ಪಾರ್ಕ್ ಪೊಲೀಸರು ಮಾತ್ರ ಹೋಟೆಲಿಗೆ ಬಂದಿಲ್ಲ. ಸಿಸಿಬಿ ಪೊಲೀಸರು ಸಹ ಹೋಟೆಲಿಗೆ ಬಂದು ಎರಡು ದಿನದ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ.