ಚಿಕ್ಕಮಗಳೂರು: ದಾರಿಯಲ್ಲಿ ಸಿಕ್ಕ ಪರ್ಸನ್ನ ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಶಿಕ್ಷಕರೊಬ್ಬರು ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ.
ಕಳಸ ಪಟ್ಟಣದ ಪ್ರಭೋಧಿನಿ ಶಾಲೆಯ ಮುಖ್ಯ ಶಿಕ್ಷಕ ಆನಂದ್ ಕಳಸ ಪಟ್ಟಣದಿಂದ ಹೊರನಾಡು ರಸ್ತೆಯಲ್ಲಿ ಹೋಗುವಾಗ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪರ್ಸ್ ಸಿಕ್ಕಿತ್ತು. ದಾರಿ ಮಧ್ಯೆ ಸಿಕ್ಕ ಆ ಪರ್ಸಿನಲ್ಲಿ ನಗದು ಹಾಗೂ ಅಗತ್ಯ ದಾಖಲೆಗಳು ಇದ್ದವು. ಇದನ್ನೂ ಓದಿ: ರಸ್ತೆ ಅಪಘಾತ: ನೋಟ್‍ಬುಕ್ ತರಲು ಪಟ್ಟಣಕ್ಕೆ ಬಂದಿದ್ದ ವಿದ್ಯಾರ್ಥಿ ಸಾವು
ದಾರಿಯಲ್ಲಿ ಸಿಕ್ಕಿದ ನಗದು ಹಾಗೂ ಅಗತ್ಯ ದಾಖಲೆಗಳನ್ನ ಮರಳಿ ವಾರಸುದಾರರಿಗೆ ನೀಡಿ ಶಿಕ್ಷಕ ಆನಂದ್ ಮಾನವೀಯತೆ ಮೆರೆದಿದ್ದಾರೆ. ಆರು ಸಾವಿರಕ್ಕೂ ಹೆಚ್ಚು ನಗದು, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇದ್ದವು. ಅದರಲ್ಲಿರುವ ವಿಳಾಸ ಪತ್ತೆ ಹಚ್ಚಿದ ಶಿಕ್ಷಕ ಆನಂದ್ ದಾರಿಯಲ್ಲಿ ಸಿಕ್ಕ ಪರ್ಸ್ ಹೊರನಾಡಿನ ಅಭಿನಂದನ್ ಎಂಬುವರದ್ದು ಎಂದು ತಿಳಿದು ಬಂದಿದೆ.
ಆ ವಿಳಾಸವನ್ನ ಹುಡುಕಿ ಸಂಬಂಧಪಟ್ಟವರಿಗೆ ಪರ್ಸನ್ನ ಹಿಂದಿರುಗಿಸಿದ್ದಾರೆ. ಪರ್ಸ್ ಕಳೆದುಕೊಂಡಿದ್ದ ಅಭಿನಂದನ್ ಪರ್ಸಿಗಾಗಿ ಹುಡುಕಾಟ ಆರಂಭಿಸಿದ್ದರು. ಕಳೆದ ರಾತ್ರಿ ತಾನೂ ಓಡಾಡಿದ ಜಾಗದಲ್ಲೆಲ್ಲಾ ಹುಡುಕಾಡಿದ್ದರು. ಆದರೆ, ಪರ್ಸ್ ಸಿಕ್ಕಿರಲಿಲ್ಲ. ಇಡೀ ರಾತ್ರಿ ಹುಡುಕಾಡಿದರೂ ಸಿಗದ ಪರ್ಸನ್ನ ಬೆಳಗ್ಗೆ ಶಿಕ್ಷಕ ಆನಂದ್ ಮನೆಗೆ ತಂದಾಗ ಪರ್ಸ್ ಕಳೆದುಕೊಂಡ ಅಭಿನಂದನ್ ಸಂತೋಷಗೊಂಡು ಆನಂದ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.