– ಸಿಎಂ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ
ಹಾಸನ: ಬಿಜೆಪಿ ಸರ್ಕಾರವು ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ.
ಮಂತ್ರಿಮಂಡಲ ರಚನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮಂತ್ರಿಮಂಡಲವು ಅತ್ಯಂತ ಅಸಮತೋಲನದಿಂದ ಕೂಡಿದೆ. 30 ಜನ ಮಂತ್ರಿಗಳಿದ್ದರೂ 17 ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಅದು ಅಲ್ಲದೇ ಆರೋಪ ಇರೋರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ಇವರು ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ ಸರ್ಕಾರವೆಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಕಿಡಿಕಾರಿದರು.
Advertisement
Advertisement
ಸರ್ಕಾರವು ಹೆಚ್ಚು ಸಂಖ್ಯೆಯಿರುವ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಮಹಿಳೆಯರಿಗೂ ಸಹ ಸರಿಯಾದ ಪ್ರಾತಿನಿಧ್ಯ ಕೊಟ್ಟಿಲ್ಲ. ಗೊಲ್ಲ ಸಮಾಜದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ. ಚುನಾವಣೆ ವೇಳೆ ಶಿರಾದ ಗೊಲ್ಲ ಸಮುದಾಯಕ್ಕೆ ನಿಗಮ ಸ್ಥಾಪಿಸುತ್ತೇವೆ ಎಂದಿದ್ದರು. ಆದರೆ ಆ ಕಡೆ ಗಮನವೇ ಕೊಟ್ಟಿಲ್ಲ. ರಾಜಕಾರಣಿಗಳು ಸಂದರ್ಭಕ್ಕೆ ತಕ್ಕಂತೆ ಏನಾದ್ರು ಆಶ್ವಾಸನೆ ಕೊಡುತ್ತೇವೆ. ಆದರೆ ಅದನ್ನು ಈಡೇರಿಸುವುದಿಲ್ಲ ಎಂದು ಟೀಕಿಸಿದ್ದಾರೆ.
Advertisement
ಹಾಸನದಲ್ಲಿನ ಪ್ರವಾಹ ಕುರಿತು ಮಾತನಾಡಿದ ಅವರು, ಇಲ್ಲಿ 4 ವರ್ಷಗಳಿಂದ ಮಳೆಯಾಗುತ್ತಿದೆ. ಸಚಿವರು, ಅಧಿಕಾರಿಗಳು ಮಳೆ ಬಂದಾಗ ಬಂದು ಸಮೀಕ್ಷೆ ಮಾಡುತ್ತಿದ್ದಾರೆ. ಆ ಸಮೀಕ್ಷೆಗೆ ತಕ್ಕಂತೆ ಹಣವನ್ನು ಸಹ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. 2017 ರಲ್ಲಿ 321 ಕೋಟಿ ರೂ. 2018 ರಲ್ಲಿ 178 ಕೋಟಿ ರೂ. 2019 ರಲ್ಲಿ 160 ಕೋಟಿ ರೂ. 2021 ರಲ್ಲಿ 78 ಕೋಟಿ ರೂ ನಷ್ಟ ಎಂದು ಜಿಲ್ಲಾಡಳಿತ ಸಮೀಕ್ಷೆ ಮಾಡಿದೆ ಎಂದು ತಿಳಿಸಿದ್ದಾರೆ.
Advertisement
ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರವಾರಕ್ಕೆ ಪ್ರವಾಹ ವಿಚಾರವಾಗಿ ಹೋಗಿ ಬಂದಿದ್ದಾರೆ. ಅದೇ ರೀತಿ ಎಲ್ಲ ಜಿಲ್ಲೆಗೂ ಸಿಎಂ ಬಂದು ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಸಕಲೇಶಪುರಕ್ಕೂ ಬರಬೇಕು ನಾವು ಸ್ವಾಗತ ಮಾಡುತ್ತೇವೆ. ಅವರು ಇಲ್ಲಿಗೆ ಬಂದಾಗ ಅನುಕೂಲ ಹೆಚ್ಚಾಗುತ್ತೆ. ಮಳೆಯಿಂದ ಕಾಫಿ, ಏಲಕ್ಕಿ, ಮೆಣಸು, ಭತ್ತದ ಬೆಳೆಗಳು ಸಾಕಷ್ಟು ಹಾನಿಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ 225 ಕಿಲೋಮೀಟರ್ ರಸ್ತೆ ಹಾಳಾಗಿದೆ. ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕನಿಷ್ಠ ನೂರು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆ.ಜಿ.ಬೋಪಯ್ಯ ಅವರು ಆರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ನಮಗೂ ಬೇಜಾರಾಗಿದೆ, ಹಾಸನ ಜಿಲ್ಲೆಗೆ, ಕೊಡಗಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಹೆಚ್‍ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು? ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ
ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರನ್ನು ಅವರ ನಿವಾಸದಲ್ಲಿ ಸಿಎಂ ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ. ಅದನ್ನು ಸ್ವಾಗತ ಮಾಡುತ್ತೇನೆ. ಅದು ಅಲ್ಲದೇ ದೇವೇಗೌಡರು ಅತ್ಯಂತ ಹಿರಿಯ ರಾಜಕಾರಣಿ, ಮಾಜಿಪ್ರಧಾನಮಂತ್ರಿಯಾಗಿದ್ದವರು. ರಾಜ್ಯದ ಹಿತದೃಷ್ಟಿಯಿಂದ ದೇವೇಗೌಡರ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರ ಸಲಹೆ ಎಲ್ಲರಿಗೂ ಅಗತ್ಯವಿದೆ. ಅದನ್ನು ಪ್ರಶ್ನೆ ಮಾಡುವುದು ಸಣ್ಣತನ, ಅಲ್ಪತನ, ಅನುಭವದ ಕೊರತೆ ಇರುವವರು ಮಾತ್ರ ಆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಶಾಸಕ ಪ್ರೀತಂಗೌಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್‍ಡಿಕೆ ತಿರುಗೇಟು