ದನಗಳ್ಳರನ್ನ ಹಿಡಿದುಕೊಟ್ರೆ 50 ಸಾವಿರ ಕೊಡ್ತೀನಿ: ಕಾಫಿನಾಡಿನ ರೈತ ಆಫರ್

Public TV
2 Min Read
ckm farmer4

ಚಿಕ್ಕಮಗಳೂರು: ಕಳೆದ ಹತ್ತು ತಿಂಗಳಲ್ಲಿ ಏಳು ಹಸುಗಳನ್ನು ಕಳೆದುಕೊಂಡಿದ್ದೇನೆ. ದನಗಳ್ಳರನ್ನು ಹಿಡಿದುಕೊಟ್ಟರೆ ನಿಂತ ಜಾಗದಲ್ಲಿ ನಾನೇ ಅವರಿಗೆ 50 ಸಾವಿರ ಹಣ ಕೊಡುತ್ತೇನೆ ಎಂದು ಚಿಕ್ಕಮಗಳೂರು ತಾಲೂಕಿನ ತೇಗೂರಿನ ರೈತ ಕಾಂತರಾಜ್ ಆಫರ್ ಕೊಟ್ಟಿದ್ದಾರೆ.

ದನಗಳ್ಳರನ್ನು ಯಾರೇ ಹಿಡಿದುಕೊಟ್ಟರು ಅವರಿಗೆ ಹಣ ಕೊಡುತ್ತೇನೆ ಎಂದು ಘೋಷಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ರೈತ ಕಾಂತರಾಜು ಅಲಿಯಾಸ್ ಎಮ್ಮೆ ಕಾಂತಣ್ಣರವರ ಎಂಟೂವರೆ ತಿಂಗಳ ಗರ್ಭಿಣಿ ಹಸುವನ್ನು ದನಗಳ್ಳರು ಸ್ಕಾರ್ಪಿಯೋ ಕಾರಿನಲ್ಲಿ ತುಂಬಿಕೊಂಡು ಹೋಗಿದ್ದರು. ಈ ವೇಳೆ ಹಸುವಿನ ಕರು ಕಾರಿನ ಹಿಂದೆ ಅಮ್ಮನಿಗಾಗಿ ಓಡುವ ದೃಶ್ಯ ಮನಕಲಕುವಂತಿತ್ತು.

ckm farmer 2 medium

ಮೇವಿಗೆ ಹೋಗಿದ್ದ ಹಸುಗಳು, ಜೋಳದ ಹೊಲಕ್ಕೆ ಹೋದ ದನಗಳು ಬರುತ್ತವೆ ಎಂದು ಅಲ್ಲೇ ಬಿಟ್ಟು ಬಂದಿದ್ದರು. ರಾಸುಗಳ ಜಮೀನು ಪಕ್ಕದಲ್ಲಿ ಜಾಗದಲ್ಲೇ ಇದ್ದವು. ಇದೇ ಮೊದಲಲ್ಲ ಈ ಹಿಂದೆಯೂ ರಾಸುಗಳು ಮನೆಗೆ ಬರದಿದ್ದರೆ ಅಲ್ಲೇ ಇರುತ್ತಿದ್ದವು. ಆದರೆ ಹೊಲದ ಪಕ್ಕದಲ್ಲೇ ಇದ್ದ ರಾಸುಗಳನ್ನು ಮೊನ್ನೆ ರಾತ್ರಿ ಕಿರಾತಕರು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದರು. ಇದರಿಂದ ಮನನೊಂದ ರೈತ ಕಾಂತಣ್ಣ ದನಗಳ್ಳರ ತಲೆ ಇನಾಮು ಘೋಷಿಸಿದ್ದಾರೆ.

ಅಷ್ಟೆ ಅಲ್ಲದೆ ಕಳೆದ ಒಂದು ವರ್ಷದಲ್ಲಿ ಎಮ್ಮೆ ಕಾಂತಣ್ಣ ಒಟ್ಟು ಏಳು ಹಸುಗಳನ್ನು ಕಳೆದುಕೊಂಡಿದ್ದಾರೆ. ಆರು ಹಸುಗಳನ್ನ ಕದ್ದಿದ್ದಾರೆಂಬ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ ಮೇವಿಗೆ ಹೋದ ರಾಸುಗಳು ಮನೆಗೆ ಬಂದಿಲ್ಲ. ಪ್ರತಿನಿತ್ಯ ಬರುತ್ತಿದ್ದ ರಾಸುಗಳು ಅಂದು ಬಂದಿಲ್ಲ. ಜೊತೆಗೆದ್ದ ಎಲ್ಲಾ ಹಸುಗಳು ಬಂದಿದ್ದು, ಅವುಗಳು ಮಾತ್ರ ಕಾಣೆಯಾಗಿವೆ ಅಂದರೆ ದನಗಳ್ಳರು ಕದ್ದಿದ್ದಾರೆಂದು ಭಾವಿಸಲಾಗಿದೆ. ಅದರಲ್ಲಿ ವಯಸ್ಸಿಗೆ ಬಂದ ಕರುಗಳೇ ಹೆಚ್ಚು. ಆದ್ದರಿಂದ ಕಾಂತಣ್ಣ ಸಾಕಷ್ಟು ನೊಂದು ಈ ತೀರ್ಮಾನಕ್ಕೆ ಬಂದಿದ್ದಾರೆ.

ckm farmer 3 medium

ಅಜ್ಜನ ಕಾಲದಿಂದಲೂ ಗೋ ಸಾಕಾಣೆಯಿಂದಲೇ ಬದುಕು ಕಟ್ಟಿಕೊಂಡಿರೋ ಕಾಂತಣ್ಣ, ಅವುಗಳನ್ನು ಮಕ್ಕಳಂತೆ ಪ್ರೀತಿಸುತ್ತಾ ಬಂದಿದ್ದಾರೆ. ಸದ್ಯಕ್ಕೆ ಎಮ್ಮೆ ಕಾಂತಣ್ಣರ ಬಳಿ 44 ಎಮ್ಮೆ, 9 ಹಸು, 10ಕ್ಕೂ ಹೆಚ್ಚು ದನಕರುಗಳಿವೆ. ಒಂದೊಂದು ಹಸು ಮನೆಗೆ ಬಾರದಿದ್ದಾಗಲೂ ಕಾಂತಣ್ಣ ಮಮ್ಮುಲು ಮರುಗಿದ್ದಾರೆ. ಆದ್ದರಿಂದ ದನಗಳ್ಳರನ್ನ ಹಿಡಿದುಕೊಟ್ಟರೆ ನಾನೇ ಅವರಿಗೆ ಬಹುಮಾನ ಕೊಡುತ್ತೇನೆ ಎಂದು ಘೋಷಿಸಿ ಗೋಪ್ರೇಮ ಮೆರೆದಿದ್ದಾರೆ.

ckm farmer4 1 medium

ಜಿಲ್ಲೆಯ ಮಲೆನಾಡು ಭಾಗದಲ್ಲು ಸಾಕಷ್ಟು ಗೋ ಕಳ್ಳತನ ಪ್ರಕರಣಗಳಿವೆ. ಕಾರುಗಳಲ್ಲಿ ಬರುವ ದನಗಳ್ಳರು ರಸ್ತೆ ಬದಿ ಇರುವ ದನಕರುಗಳನ್ನು ಕದಿಯುತ್ತಿದ್ದರು. ಇದರಿಂದ ಮಲೆನಾಡು ಭಾಗದ ರೈತರು ಆತಂಕಕ್ಕೀಡಾಗಿದ್ದಾರೆ. ಕೆಲವರು ಸಿಕ್ಕಿಬಿದ್ದಿದ್ದರು. ಮತ್ತಲವರು ಗಾಡಿಗಳು ಅಪಘಾತವಾಗಿ ಸಿಕ್ಕಿಬಿದ್ದಿದ್ದರು. ಆದರೂ ದನಗಳ್ಳರ ಹಾವಳಿ ಮಲೆನಾಡು ಭಾಗದಲ್ಲಿ ಹೆಚ್ಚಿದ್ದು ಇದೀಗ, ಜಿಲ್ಲಾ ಕೇಂದ್ರಕ್ಕೂ ಕಾಲಿಟ್ಟಿದೆ. ಹಾಗಾಗಿ ಜಿಲ್ಲೆಯ ರೈತರು ಶೀಘ್ರವೇ ಪೊಲೀಸರು ದನಗಳ್ಳರ ಹಾವಳಿಗೆ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *