ಚಾಮರಾಜನಗರ: ತೋಟದ ಮನೆಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿದ್ದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿಯಲ್ಲಿ ಘಟನೆ ನಡೆದಿದ್ದು, ಬಂಧಿತ ದರೋಡೆಕೋರರನ್ನು ಗುಂಡ್ಲುಪೇಟೆ ತಾಲೂಕು ಕೋಡಹಳ್ಳಿಯ ಸಿದ್ದ, ಪ್ರದೀಪ ಹಾಗೂ ರವಿ ಎಂದು ಗುರುತಿಸಲಾಗಿದೆ.
Advertisement
Advertisement
ಹೊಂಗಳ್ಳಿ ಹೊರವಲಯಲದಲ್ಲಿ ಕೇರಳ ಮೂಲದ ಪ್ರದೀಪ್ ಅವರು ತೋಟ ಗುತ್ತಿಗೆ ಪಡೆದು ತೋಟದ ಮನೆಯಲ್ಲೇ ವಾಸವಿದ್ದಾರೆ. ತಡ ರಾತ್ರಿ ತೋಟದ ಮನೆಗೆ ನುಗ್ಗಿದ ಮೂವರು ದರೋಡೆಕೋರರ ತಂಡ ಮಾಲೀಕ ಪ್ರದೀಪ್ ಮೇಲೆ ಖಾರದಪುಡಿ ಎರಚಿ ರಾಡ್ ನಿಂದ ಹಲ್ಲೆ ನಡೆಸಿದೆ. ಈ ವೇಳೆ ಮಾಲೀಕ ಪ್ರದೀಪ್ ಸಹ ಪ್ರತಿ ದಾಳಿ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಹೊಡೆದಾಟ ನಡೆದಿದೆ. ಇದೇ ಸಂದರ್ಭದಲ್ಲಿ ಮನೆಯ ಒಳಗಿನಿಂದ ಕಬ್ಬಿಣದ ರಾಡ್ ತಂದ ಪ್ರದೀಪ್ ದರೋಡೆಕೋರರ ಮೇಲೆ ಬೀಸಿದ ಪರಿಣಾಮ ಓರ್ವ ದರೋಡೆಕೋರ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.
Advertisement
Advertisement
ಉಳಿದಿಬ್ಬರು ದರೋಡೆಕೋರರು ಪ್ರದೀಪ್ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಪತ್ನಿ ಕುತ್ತಿಗೆಯಲ್ಲಿದ್ದ 40 ಗ್ರಾಂ. ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ತಕ್ಷಣ ಪ್ರದೀಪ್ ಗ್ರಾಮಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಧಾವಿಸಿದ ಗ್ರಾಮಸ್ಥರು ಕುಸಿದುಬಿದ್ದು, ಗಾಯಗೊಂಡಿದ್ದ ದರೋಡೆಕೋರನ ಕೈಕಾಲು ಕಟ್ಟಿ ಗುಂಡ್ಲುಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಗುಂಡ್ಲುಪೇಟೆ ಪೊಲೀಸರು ಕುಸಿದುಬಿದ್ದಿದ್ದ, ಗ್ರಾಮಸ್ಥರು ಹಿಡಿದಿಟ್ಟಿದ್ದ ದರೋಡೆಕೋರನನ್ನು ಬಂಧಿಸಿ ಕರೆದೊಯ್ದು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತ ನೀಡಿದ ಸುಳಿವಿನ ಮೇರೆಗೆ ಸರ್ಕಲ್ ಇನ್‍ಸ್ಪೆಕ್ಟರ್ ಮಹದೇವಸ್ವಾಮಿ, ಎಸ್‍ಐ ರಾಜೇಂದ್ರ ನೇತೃತ್ವದಲ್ಲಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಉಳಿದ ಇಬ್ಬರು ದರೋಡೆಕೋರರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ತೋಟದ ಮಾಲೀಕ ಪ್ರದೀಪ್ ನನ್ನು ಚಿಕಿತ್ಸೆಗಾಗಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.