ತುಮಕೂರು: ಜಿಲ್ಲೆಯ ತುರುವೇಕೆ ತಾಲೂಕಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಭಾರೀ ಮಳೆಗೆ ಜನ ತತ್ತರಿಸಿದ್ದಾರೆ. ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಹಲವು ದಿನಗಳಿಂದ ಮಳೆಯಿಲ್ಲದೆ ಸೊರಗಿದ್ದ ರೈತರು, ಇದೀಗ ಮಳೆಯಿಂದ ಕೊಂಚ ನಿರಾಳರಾಗಿದ್ದಾರೆ. ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಬೆಳೆಗಳಿಗೆ ಅನುಕೂಲವಾಗಲಿದೆ. ತಾಲೂಕಿನಾದ್ಯಂತ ಶೇ.94ರಷ್ಟು ಹೆಸರು ಸೇರಿದಂತೆ, ಇನ್ನಿತರ ಪೂರ್ವಮುಂಗಾರು ಬೆಳೆ ಬಿತ್ತನೆ ಮಾಡಲಾಗಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಉದ್ದು ಬಿಡಿಸುವ ಕಾರ್ಯಕ್ಕೆ ತೊಡಕಾಗಿದೆ. ಮಳೆ ಹೀಗೆ ಮುಂದುವರಿದರೆ ಹೊಲದಲ್ಲಿಯೇ ಮೊಳಕೆಯೊಡೆಯಲಿದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.
ತಾಲೂಕಿನ ಮುನಿಯೂರು, ಸಾರಿಗೇಹಳ್ಳಿ, ಮಲ್ಲಾಘಟ್ಟ ಹಾಗೂ ಇನ್ನು ಕೆಲ ಗದ್ದೆ ಬಯಲುಗಳಲ್ಲಿ ಭತ್ತ ಬೆಳೆಯಲಾಗಿದ್ದು, ಭತ್ತದ ಬೆಳೆ ಕಟಾವಿಗೆ ಬಂದಿದೆ. ಕೆಲವು ರೈತರು ಭತ್ತವನ್ನು ಕಟಾವು ಮಾಡಿಸಿದ್ದು, ಗದ್ದೆ ಬಯಲಿನಲ್ಲಿ ಭತ್ತದ ಹುಲ್ಲು ಮಳೆ ನೀರಿಗೆ ಕೊಳೆಯುವ ಆತಂಕದಲ್ಲಿದ್ದಾರೆ.