ಕಾರವಾರ: ಒಂದೆಡೆ ತುಂಬಿ ಹರಿಯುತ್ತಿರೋ ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿ, ಇನ್ನೊಂದೆಡೆ ಪ್ರವಾಹಕ್ಕೆ ಕೊಚ್ಚಿಹೋಗಿರುವ ತೂಗುಸೇತುವೆ. ಮತ್ತೊಂದೆಡೆ ಅಪಾಯಕಾರಿಯಾದ ತೆಪ್ಪ. ಆ ತೆಪ್ಪದಲ್ಲಿ ಮಕ್ಕಳ ಸಾವಿನ ಸಂಚಾರ. ಇದನ್ನೆಲ್ಲಾ ನೋಡಿದ್ರೆ ಜೀವ ಝಲ್ ಎನಿಸದೇ ಇರದು. ಇದು ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಡೋಂಗ್ರಿ ಭಾಗದಲ್ಲಿ ಕಂಡು ಬರುವ ದೃಶ್ಯ.
Advertisement
2016ರಲ್ಲಿ ಸುಂಕಸಾಳ ಮತ್ತು ಡೋಂಗ್ರಿಯಲ್ಲಿ ಗಂಗಾವಳಿ ನದಿ ದಾಟಲು ತೂಗುಸೇತುವೆ ನಿರ್ಮಿಸಲಾಗಿತ್ತು. ಆದ್ರೆ ಕಳೆದ ಬಾರಿಯ ಪ್ರವಾಹಕ್ಕೆ ತೂಗುಸೇತುವೆ ಕೊಚ್ಚಿ ಛಿದ್ರವಾಗಿದೆ. ಹೀಗಾಗಿ ಡೋಂಗ್ರಿ, ಬಿದ್ರಳ್ಳಿ, ಹೆಗ್ಗರಣಿ ಭಾಗದ ಜನ, ಶಾಲೆಗೆ ತೆರಳೋ ಮಕ್ಕಳು ತುಂಬಿ ಹರಿಯುವ ನದಿಯಲ್ಲಿ ತೆಪ್ಪದಲ್ಲೇ ದಾಟಬೇಕು. ಜಿಲ್ಲಾಡಳಿತ ಒಂದು ಬೋಟ್ ಕೊಟ್ಟಿದೆ. ತೆಪ್ಪ ಇಲ್ಲದಿದ್ದರೆ ಬಿದಿರಿನಿಂದ ಮಾಡಿದ ತೆಪ್ಪದಾಕೃತಿಯ ವಸ್ತುವಲ್ಲೇ ನದಿ ದಾಟಬೇಕು. ಇದು ಮಗುಚಿದರೆ ಮಕ್ಕಳು ನೀರುಪಾಲು ಗ್ಯಾರೆಂಟಿ.
Advertisement
Advertisement
ಡೋಂಗ್ರಿ, ಬಿದ್ರಳ್ಳಿ ಹಾಗೂ ಹೆಗ್ಗರಣಿಯಲ್ಲಿ ನೂರಾರು ಬಡಕುಟುಂಬಗಳು ವಾಸಿಸುತ್ತಿವೆ. ಅಂಕೋಲಾದಿಂದ ಈ ಗ್ರಾಮಕ್ಕೆ ದಿನಕ್ಕೊಂದು ಬಸ್ ಮಾತ್ರ ಓಡಾಡತ್ತೆ. ಇನ್ನು ಗ್ರಾಮದಿಂದ ಸುಂಕನಾಳಕ್ಕೆ ಕೇವಲ 3 ಕಿಲೋ ಮೀಟರ್. ಬಸ್ಸಿನಲ್ಲಿ ಸುತ್ತುವರಿದು ಬರಬೇಕಾದ್ರೆ 20 ಕಿಲೋ ಮೀಟರ್ ಸಾಗಬೇಕು. ಹಾಗಾಗಿ ಎಲ್ಲರೂ ತೆಪ್ಪವನ್ನೇ ಆಶ್ರಯಿಸಿದ್ದಾರೆ. ಬೋಟ್ ಸಿಗದಿದ್ರೆ ಮಕ್ಕಳು ಶಾಲೆಗೆ ರಜೆ ಹಾಕಬೇಕಾಗುತ್ತೆ. ಹೀಗಾಗಿ ಆದಷ್ಟು ಬೇಗ ತೂಗುಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement
ತೂಗುಸೇತುವೆ ಕೊಚ್ಚಿ ಹೋದ ಮೇಲೆ ಇಲ್ಲಿನ ಜನರು ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಅವರಿಗೆ ಮನವಿ ನೀಡಿದ್ರು. ಆದರೆ ತೂಗುಸೇತುವೆ ಕೊಚ್ಚಿಹೋಗಿ ಎರಡು ವರ್ಷಕಳೆದರೂ ಕಾಮಗಾರಿ ಸಹ ಪ್ರಾರಂಭವಾಗಿಲ್ಲ. ಸರ್ಕಾರ, ಜನಪ್ರತಿನಿಧಿಗಳು ಮುಂದಾಗಬಹುದಾದ ಅನಾಹುತ ತಡೆಯುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ.