ತೀವ್ರ ಸಂಕಷ್ಟಗೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಬೆನ್ನೆಲುಬಾದ ನೆಟ್ಟಿಗರು!

Public TV
3 Min Read
delhi baba ka daba

– ಟ್ವಿಟ್ಟರ್ ಟ್ರೆಂಡಿಂಗ್‍ನಲ್ಲಿದೆ ‘ಬಾಬಾ ಕಾ ಡಾಬಾ’
– ವೃದ್ಧ ದಂಪತಿಯ ಕಣ್ಣೀರಿಗೆ ಕರಗಿದ ಮಂದಿ

ನವದೆಹಲಿ: ಕೊರೊನಾ ಮಹಾಮಾರಿಯಿಂದಾಗಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿರುವುದು ತಿಳಿದೇ ಇದೆ. 80 ವರ್ಷದ ದಂಪತಿ ಸಹ ಇದೇ ಪರಿಸ್ಥಿತಿ ಎದುರಿಸುತ್ತಿದ್ದು, ತೀವ್ರ ಸಂಕಷ್ಟದಲ್ಲಿದ್ದಾರೆ. ನೆಟ್ಟಿಗರು ಇವರ ಸಹಾಯಕ್ಕೆ ನಿಂತಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

ಹಿರಿಯ ಜೀವಗಳು ದೆಹಲಿಯ ಮಾಳ್ವಿಯಾ ನಗರದಲ್ಲಿ ‘ಬಾಬಾ ಕಾ ಡಾಬಾ’ ಹೆಸರಿನ ಹೋಟೆಲ್ ನಡೆಸುತ್ತಿದ್ದಾರೆ. ಆದರೆ ಲಾಕ್‍ಡೌನ್ ಬಳಿಕ ಅವರಿಗೆ ಸರಿಯಾಗಿ ವ್ಯಾಪಾರವಾಗುತ್ತಿಲ್ಲ. ಇದನ್ನು ಮನಗಂಡ ನೆಟ್ಟಿಗರು ಇಲ್ಲಿನ ಸುತ್ತಲಿನವರು ದಯವಿಟ್ಟು ಇವರ ಹೋಟೆಲ್‍ನಲ್ಲಿ ಊಟ ಮಾಡಿ ಅವರಿಗೂ ಬದುಕಲು ಅವಕಾಶ ಮಾಡಿಕೊಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

ಇತ್ತೀಚೆಗೆ ಅವರ ಹೋಟೆಲ್‍ಗೆ ಊಟಕ್ಕೆ ಬರುವವರ ಸಂಖ್ಯೆ ತೀರಾ ವಿರಳವಾಗಿದ್ದು, ಹೀಗಾಗಿ ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ. ಇದನ್ನು ಕಂಡ ಸ್ಥಳೀಯರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ದಯವಿಟ್ಟು ಸ್ಥಳೀಯ ವ್ಯಾಪಾರಿಗಳನ್ನು ಉಳಿಸಿ ಎಂದು ವಸುಂಧರ ತಂಖಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಂತರ ನನ್ನ ಹೃದವೇ ಒಡೆದಂತಾಯಿತು. ದೆಹಲಿಯ ಜನ ಅವಕಾಶ ಸಿಕ್ಕರೆ ದಯವಿಟ್ಟು ಅವರ ಬಾಬಾ ಕಾ ಡಾಬಾಗೆ ಹೋಗಿ ಊಟ ಮಾಡಿ ಎಂದು ಮನವಿ ಮಾಡಿದ್ದಾರೆ.

ಈ ವಿಡಿಯೋವನ್ನು ಮೊದಲು ಸ್ವಾದ್ ಅಫೀಶೀಯಲ್ ಎಂಬ ಫೇಸ್ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. 80 ವರ್ಷದ ವೃದ್ಧ ದಂಪತಿ ಮಟರ್ ಪನೀರ್ ಸೇರಿದಂತೆ ವಿವಿಧ ಖಾದ್ಯಗಳನ್ನು ತಮ್ಮ ಡಾಬಾದಲ್ಲಿ ಮಾರಾಟ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ದಂಪತಿ ಅಳುತ್ತಿರುವುದನ್ನು ಕಾಣಬಹುದಾಗಿದ್ದು, ಅವರಿಗೆ ಗೊತ್ತಾಗದಂತೆ ವಿಡಿಯೋ ಮಾಡಲಾಗಿದೆ. 1988 ರಿಂದಲೂ ಈ ದಂಪತಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಅವರಿಗೆ ತಮ್ಮ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ವಿಡಿಯೋ ಮಾಡುತ್ತಲೇ, ಆಹಾರ ಪದಾರ್ಥ ಚೆನ್ನಾಗಿರುತ್ತದೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೆ ವಿಳಾಸವನ್ನು ಹೇಳಿದ್ದಾರೆ.

ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಸಖತ್ ವೈರಲ್ ಆಗಿದ್ದು, ಬಾಲಿವುಡ್ ನಟ, ನಟಿಯರು ಸಹ ವಿಡಿಯೋ ಶೇರ್ ಮಾಡಿದ್ದಾರೆ. ಇವರ ಹೋಟೆಲ್‍ನಲ್ಲಿ ಊಟ ಮಾಡುವುದರಿಂದ ನೀವು ಕೇವಲ ಆ ವೃದ್ಧ ದಂಪತಿಯನ್ನು ಉಳಿಸಿದಂತೆ ಆಗುವುದಿಲ್ಲ. ಸ್ಥಳೀಯ ವ್ಯಾಪಾರವನ್ನು ಉಳಿಸಿದಂತಾಗುತ್ತದೆ ಎಂದು ಹಲವು ಬೇಡಿಕೊಂಡಿದ್ದಾರೆ.

ಬಾಲಿವುಡ್ ನಟರಾದ ರಣದೀಪ್ ಹೂಡಾ, ರವೀನಾ ಟಂಡನ್ ಹಾಗೂ ಸುನೀಲ್ ಶೆಟ್ಟಿ ಅವರು ವಿಟಿಯೋ ಟ್ವೀಟ್ ಮಾಡಿದ್ದಾರೆ. ಈ ಕುರಿತು ಸುದ್ದಿ ಹರಿದಾಡುತ್ತಿದ್ದಂತೆ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಸಂತಸದ ವಿಚಾರವನ್ನು ಹಂಚಿಕೊಂಡಿದ್ದು, ದಂಪತಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಎಪಿ ಶಾಸಕ ಸೋಮನಾಥ್ ಭಾರ್ತಿ ಆಗಮಿಸಿದ್ದಾರೆ. ಅಲ್ಲದೆ ಹೆಚ್ಚು ಜನ ಊಟಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಅವರ ಮೊಗದಲ್ಲಿ ಸಂತಸ ಮೂಡಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *