ಗದಗ: ಕೊರೊನಾದಿಂದ ಸಾವನ್ನಪ್ಪಿದ್ದ ವೃದ್ಧೆಯ ತಿಥಿ ಕಾರ್ಯ ಮುಗಿದ ಬಳಿಕ ಮೃತದೇಹದ ಅಂತ್ಯಕ್ರಿಯೆ ಮಾಡಿದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಮಹಾ ಎಡವಟ್ಟು ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ 70 ವರ್ಷದ ವೃದ್ಧೆಗೆ ಪಾಶ್ವವಾಯು ಹಾಗೂ ಅನಾರೋಗ್ಯದ ಹಿನ್ನಲೆ ಜುಲೈ 15 ರಂದು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಜುಲೈ 18 ರಂದು ಕೊವಿಡ್-19 ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂದು ದೃಢಪಟ್ಟ ವರದಿ ಬಂದಿದೆ. ನಂತರ ಜುಲೈ 20 ರಂದು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಗ್ಯ ಇಲಾಖೆ ಕುಟುಂಬಕ್ಕೆ ಫೋನ್ ಮೂಲಕ ತಿಳಿಸಿದ್ದರು.
ತಾಯಿ ಸಾವನ್ನಪ್ಪಿದ ಎಂದು ತಿಳಿಸಿದ ಆರೋಗ್ಯ ಇಲಾಖೆ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಗಳ ಅನ್ವಯ ನೆರವೇರಿಸುತ್ತೇವೆ ಎಂದು ಕುಟುಂಬಸ್ಥರಿಗೆ ತಿಳಿಸಿತ್ತು. ಇದರಿಂದ ಮೃತ ವೃದ್ಧೆಯ ಮಗ ಪರಸಪ್ಪ ಗಡ್ಡದ ಅವರು ಜುಲೈ 28 ರಂದು 9ನೇ ದಿನದ ತಿಥಿ ಕಾರ್ಯ ಮಾಡಿ ಮುಗಿಸಿದ್ದರು. ಆದರೆ ಇದೆಲ್ಲಾ ಮುಗಿದ ಬಳಿಕ ಮತ್ತೆ ಜುಲೈ 30 ರಂದು ಮತ್ತೆ ಗದಗ ಜಿಮ್ಸ್ ಆಸ್ಪತ್ರೆಯಿಂದ ಕರೆ ಮಾಡಿ, ವೃದ್ಧೆಯ ಸ್ವಗ್ರಾಮ ನರೇಗಲ್ ಪಟ್ಟಣಕ್ಕೆ ಶವ ತಂದು ಕೋವಿಡ್ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಹೇಳಿದ್ದರು.
ಆರೋಗ್ಯ ಇಲಾಖೆಯ ಕರೆಯಿಂದ ಕುಟುಂಬಕ್ಕೆ ಶಾಕ್ ಆಗಿದ್ದು, ಜುಲೈ 20 ರಂದೇ ವೃದ್ಧೆ ಸಾವನ್ನಪ್ಪಿದ ಸಂದರ್ಭದಲ್ಲಿ ಈಗ ಮತ್ತೆ ಹೇಗೆ ಮೃತದೇಹ ತರುತ್ತೀರಿ ಎಂದು ಕುಟುಂಬಸ್ಥರು ಪ್ರಶ್ನೆ ಮಾಡಿದ್ದಾರೆ. ಆದರೆ ಕುಟುಂಬಸ್ಥರ ಪ್ರಶ್ನೆಗೆ ಆರೋಗ್ಯ ಇಲಾಖೆ ಸರಿಯಾದ ಉತ್ತರ ನೀಡದೆ ಅವಾಜ್ ಹಾಕಿದ್ದಾರೆ.
ಎಲ್ಲದರ ನಡುವೆ ನರೇಗಲ್‍ನಲ್ಲಿ ಕೊನೆಗೂ ಕೋವಿಡ್-19 ನಿಯಮದ ಪ್ರಕಾರ ಅಂತ್ಯಕ್ರಿಯೆ ಮಾಡಲಾಯಿತು. ಮುಖ ನೋಡಲು ಬಿಡದೆ ಬೇರೆ ಯಾರದ್ದೋ ಮೃತದೇಹ ತಂದು ಸಿಬ್ಬಂದಿ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆದರೆ ಇತ್ತ ಸರಿಯಾದ ಮಾಹಿತಿ ನೀಡದ ಜಿಮ್ಸ್ ಆಸ್ಪತ್ರೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಬೇಜವಾಬ್ದಾರಿತನದ ವಿರುದ್ಧ ಮೃತ ವೃದ್ಧೆಯ ಮಗ ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.