ಶಿವಮೊಗ್ಗ: ಜಿಲ್ಲೆಯ ಪೊಲೀಸರ ಗನ್ ಮತ್ತೆ ಸದ್ದು ಮಾಡಿದೆ. ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಬಲಗಾಲಿಗೆ ಗುಂಡು ಹೊಡೆದಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಹಳೆ ಇಕ್ಕೇರಿ ಸಮೀಪ ನಡೆದಿದೆ.
ಪೊಲೀಸರ ಗುಂಡೇಟಿಗೆ ಒಳಗಾದ ಆರೋಪಿ ಭರತ್ ಇದೀಗ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Advertisement
Advertisement
ಪ್ರಕರಣದ ವಿವರ: ಅ.11 ರಂದು ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ತಾಯಿ ಬಂಗಾರಮ್ಮ (60) ಹಾಗೂ ಆಕೆಯ ಪುತ್ರ ಪ್ರವೀಣ್ (35)ನನ್ನು ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿಯೇ ಕೊಲೆ ಮಾಡಲಾಗಿತ್ತು. ಅಂದು ಮೃತ ಪ್ರವೀಣನ ಪತ್ನಿ ಹಾಗೂ 10 ತಿಂಗಳ ಮಗುವಿನ ಎದುರಿನಲ್ಲಿಯೇ ಇಬ್ಬರನ್ನು ಕೊಲೆ ಮಾಡಲಾಗಿತ್ತು. ಆದರೆ ಕೊಲೆಗೆ ನಿಖರ ಕಾರಣ ಗೊತ್ತಾಗಿರಲಿಲ್ಲ.
Advertisement
ಘಟನೆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಹಾಗೂ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಈ ಘಟನೆ ಪೊಲೀಸರಿಗೆ ತಲೆ ನೋವಾಗಿತ್ತು. ಕೊಲೆ ಏಕೆ ನಡೆದಿದೆ ಎಂಬ ಅನುಮಾನ ಕಾಡಲಾರಂಭಿಸಿತ್ತು. ಕೊಲೆಯಾದವರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು. ಅಷ್ಟೊಂದು ಸ್ಥಿತಿವಂತರಲ್ಲ. ಜೊತೆಗೆ ಕೊಲೆ ಮಾಡಿದ ನಂತರ ಮನೆಯಿಂದ ಯಾವ ವಸ್ತುವನ್ನು ತೆಗೆದುಕೊಂಡು ಹೋಗಿಲ್ಲ. ಅಲ್ಲದೇ ಮನೆಯಲ್ಲಿಯೇ ಇದ್ದ ಹತ್ಯೆಯಾದ ಪ್ರವೀಣನ ಪತ್ನಿ ಹಾಗೂ ಆತನ ಮಗುವನ್ನು ಏನು ಮಾಡಿಲ್ಲ.
Advertisement
ಕೊಲೆ ಏಕೆ ನಡೆದಿದೆ ಎಂಬುದು ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ಈಗಾಗೀ ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಅವರು ಪ್ರಕರಣದ ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡ ರಚಿಸಿದ್ದರು. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಮೊದಲಿಗೆ ಹತ್ಯೆಯಾದ ಪ್ರವೀಣನ ಪತ್ನಿ ಮೇಲೆಯೇ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈಕೆಗೆ ಏನಾದರೂ ಬೇರೆ ಸಂಬಂಧ ಇದೆಯಾ? ಇದಕ್ಕಾಗಿ ಏನಾದರೂ ಕೊಲೆ ನಡೆದಿದೆಯಾ? ಎಂದು ವಿಚಾರಣೆ ನಡೆಸಿದ್ದರು. ಆದರೆ ಪೊಲೀಸರ ಮೊದಲ ಅನುಮಾನಕ್ಕೆ ತನಿಖೆ ವೇಳೆ ಯಾವುದೇ ಪೂರಕ ಸಾಕ್ಷಿ ಲಭಿಸಿರಲಿಲ್ಲ.
ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಕೊಲೆ ಬೇರೆಯದ್ದೆ ವಿಷಯ ಇದೆ ಎಂಬ ಮಾಹಿತಿ ದೊರೆಯಿತು. ಕೊಲೆಯಾದ ಪ್ರವೀಣನಿಗೆ ಈ ಹಿಂದೆ ಬೇರೆ ಯುವತಿ ಜೊತೆ ಪ್ರೀತಿ ಇತ್ತು. ಆದರೆ ಪ್ರವೀಣ ಆಕೆಗೆ ಕೈಕೊಟ್ಟು ರೋಹಿಣಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದ. ಇದಕ್ಕೆ ಮಾಜಿ ಪ್ರೇಯಸಿ ಪ್ರವೀಣನ ವಿರುದ್ಧ ಕೋಪಗೊಂಡಿದ್ದಳು ಎನ್ನಲಾಗಿದೆ. ಈಗಾಗಿ ತನ್ನ ಮತ್ತೊಬ್ಬ ಪ್ರಿಯಕರ ಭರತ್‍ನನ್ನು ಬಳಸಿಕೊಂಡು ಪ್ರವೀಣ ಹಾಗೂ ಆತನ ತಾಯಿ ಬಂಗಾರಮ್ಮ ಇಬ್ಬರನ್ನು ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದೆ.
ಈಗಾಗಿ ಆರೋಪಿ ಭರತ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆದಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಇಂದು ಆರೋಪಿ ಭರತ್ ನನ್ನು ಮಹಜರ್ ನಡೆಸಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಮಹಜರ್ ನಡೆಸಿ ವಾಪಸ್ ಬರುವ ವೇಳೆ ಆರೋಪಿ ಭರತ್ ಮೂತ್ರ ವಿಸರ್ಜನೆ ಮಾಡುವುದಾಗಿ ಪೊಲೀಸರ ಬಳಿ ಹೇಳಿ ಜೀಪಿನಿಂದ ಕೆಳಗಡೆ ಇಳಿದು ಹೋಗಿದ್ದಾನೆ. ಪೊಲೀಸ್ ಕಾನ್ಸ್‍ಟೇಬಲ್ ಒಬ್ಬರು ಸಹ ಈತನನ್ನು ಹಿಂಬಾಲಿಸಿದ್ದರು. ಆರೋಪಿ ಭರತ್ ಪೊಲೀಸರನ್ನು ತಳ್ಳಿ ಹಲ್ಲೆ ಮಾಡಲು ಯತ್ನಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ಡಿಸಿಆರ್ ಬಿ ಇನ್ಸ್ ಪೆಕ್ಟರ್ ಕುಮಾರ್ ಸ್ವಾಮಿ ಅವರು ಆರೋಪಿ ಭರತ್‍ನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ಆರೋಪಿ ಭರತ್‍ನನ್ನು ಸಾಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.