– 14 ದಿನಗಳಲ್ಲಿ ಯು.ಕೆ.ಯಿಂದ ಬಂದವರ ಮೇಲೆ ನಿಗಾ
ಬೆಂಗಳೂರು: ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಿದ ಬಳಿಕ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ನಡುವೆ ಯುನೈಟೆಡ್ ಕಿಂಗ್ ಡಮ್ ನಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
Advertisement
ಯು.ಕೆ.ಯಲ್ಲಿ ಹೊಸ ಪ್ರಭೇದದ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸುದೀರ್ಘ ಸಭೆ ನಡೆಸಿದರು. ನಂತರ ಸಚಿವರು ಗೃಹಕಚೇರಿ ಕೃಷ್ಣಾಗೆ ತೆರಳಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಭೆಯಲ್ಲಾದ ಚರ್ಚೆ ಕುರಿತು ಮಾಹಿತಿ ನೀಡಿದರು.
Advertisement
Advertisement
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚಿಸಿದ ಬಳಿಕ ನೈಟ್ ಕರ್ಫ್ಯೂ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಇಂದಿನಿಂದ ಜನವರಿ 2 ರವರೆಗೆ ಪ್ರತಿ ದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಇಡೀ ರಾಜ್ಯದಲ್ಲಿ ಕರ್ಫ್ಯೂ ವಿಧಿಸಲಾಗುತ್ತದೆ. ಜನರು ರಾತ್ರಿ 10ರೊಳಗೆ ತಮ್ಮ ಎಲ್ಲ ಚಟುವಟಿಕೆಗಳನ್ನು ಮುಗಿಸಿ ಮನೆಗೆ ಮರಳಬೇಕು. ಹಬ್ಬದ ಸಮಾರಂಭ, ಹೊಸ ವರ್ಷದ ಸಮಾರಂಭ, ಆಚರಣೆ ಎಂದು ಅನವಶ್ಯಕವಾಗಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
Advertisement
ಆರೋಗ್ಯ ಇಲಾಖೆಯಿಂದ ನಿಗಾ: ನವೆಂಬರ್ 25 ರಿಂದ ಡಿಸೆಂಬರ್ 22 ರವರೆಗೆ ರಾಜ್ಯಕ್ಕೆ ಯು.ಕೆ.ಯಿಂದ ಬಂದವರ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಗಾ ಇರಿಸಲಿದ್ದಾರೆ. ಯು.ಕೆ.ಯಿಂದ ಬಂದವರು ಕಡ್ಡಾಯವಾಗಿ 28 ದಿನಗಳ ಕಾಲ ಕ್ವಾರಂಟೈನ್ ಗೆ ಒಳಗಾಗಬೇಕು. ಮೊದಲ 14 ದಿನಗಳ ಕಾಲ ಅವರ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಗಾ ಇರಿಸುತ್ತಾರೆ. ನಂತರದ 14 ದಿನ ಅವರೇ ಸ್ವತಃ ನಿಗಾ ಇರಿಸಿಕೊಳ್ಳಬೇಕು ಎಂದು ವಿವರಿಸಿದರು.
ನವೆಂಬರ್ 25 ರಿಂದ ಡಿಸೆಂಬರ್ 22 ರವರೆಗೆ ಯು.ಕೆ.ಯಿಂದ ರಾಜ್ಯಕ್ಕೆ 2,500 ಜನರು ಬಂದಿದ್ದಾರೆ. ಪ್ರತಿ ದಿನ ಯು.ಕೆ.ಯಿಂದ ಎರಡೇ ವಿಮಾನ ಬಂದಿದೆ. ಯಾವ ವಿಮಾನದಲ್ಲಿ ಎಷ್ಟು ಜನ ಬಂದಿದ್ದಾರೆ ಎಂಬ ಮಾಹಿತಿಯನ್ನೂ ಕೂಡ ನೀಡಲಾಗುವುದು. ಇಷ್ಟೂ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗುವುದು. ಯಾರಲ್ಲಾದರೂ ರೋಗ ಲಕ್ಷಣ ಕಂಡುಬಂದರೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಲಾಗುವುದು ಎಂದು ತಿಳಿಸಿದರು.
ನಿಮ್ಹಾನ್ಸ್, ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವೈರಸ್ ಬಗ್ಗೆ ಅಧ್ಯಯನ ಮಾಡುವ ನಾಲ್ಕು ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಪಾಸಿಟಿವ್ ಆದವರ ಮಾದರಿಯನ್ನು ಈ ಸಂಸ್ಥೆಗಳಿಗೆ ನೀಡಿ ಹೊಸ ಪ್ರಭೇದದ ವೈರಸ್ ಬಗ್ಗೆ ಅಧ್ಯಯನ ಮಾಡಲಾಗುವುದು. ಅಗತ್ಯವಿದ್ದರೆ ಜೀನ್ ಸೀಕ್ವೆನ್ಸ್ ಅಧ್ಯಯನ ಮಾಡಲಾಗುವುದು ಎಂದು ಹೇಳಿದರು.
ತಪ್ಪು ಮಾಹಿತಿ ನೀಡಬೇಡಿ: ರಾಜಕೀಯ ಮುಖಂಡರೊಬ್ಬರು ಯು.ಕೆ.ಯಿಂದ 14 ಸಾವಿರ ಜನರು ಬಂದಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ. ನಮ್ಮ ಸರ್ಕಾರಕ್ಕೆ ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆ, ಪ್ರಯಾಣಿಕರ ಸಂಖ್ಯೆಯನ್ನು ಮರೆಮಾಚುವ ಅಗತ್ಯವಿಲ್ಲ. ಅಂಕಿ ಸಂಖ್ಯೆಯನ್ನು ಮುಚ್ಚಿಡುವ ಯಾವುದೇ ಅವಶ್ಯಕತೆ ಇಲ್ಲ. ಯಾವುದೇ ರಾಜಕೀಯ ಮುಖಂಡರು ಸರಿಯಾದ ಮಾಹಿತಿ ಕಲೆಹಾಕಿ ಮಾತನಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
As a precautionary measure to contain the spread of corona virus, Govt has decided to impose night curfew will across the state from 10 PM to 6AM starting today till 2nd Jan 2021. I request people to cooperate with the govt and strictly follow safety measures.@CMofKarnataka pic.twitter.com/XqVBsDAhxL
— Dr Sudhakar K (@mla_sudhakar) December 23, 2020
ಇದು ಅನಿವಾರ್ಯ: ಕರ್ಫ್ಯೂ ನಿರ್ಧಾರಕ್ಕೆ ಬಾರ್ ಮತ್ತು ಹೋಟೆಲ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಡಾ.ಕೆ.ಸುಧಾಕರ್, ರಾತ್ರಿ ಕರ್ಫ್ಯೂ ನಿರ್ಧಾರವನ್ನು ಸಂತೋಷದಿಂದೇನೂ ತೆಗೆದುಕೊಂಡಿಲ್ಲ. ಬಹಳ ಅನಿವಾರ್ಯ, ಅವಶ್ಯಕತೆ ಇರುವುದರಿಂದ ಹಾಗೂ ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ. ರಾತ್ರಿ 10 ಗಂಟೆ ನಂತರ ಕರ್ಫ್ಯೂ ವಿಧಿಸಲಾಗಿದೆಯೇ ಹೊರತು ಅದಕ್ಕೂ ಮುಂಚೆ ಯಾವುದೇ ಚಟುವಟಿಕೆ ನಿಷೇಧ ಮಾಡಿಲ್ಲ. ಕೃಷಿ ಚಟುವಟಿಕೆಗಳಿಗೆ, ಸರಕು ಸಾಗಣಿಕೆಗೆ, ಮಾರಾಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವಿಚಾರದಲ್ಲಿ ಎಲ್ಲರಿಗೂ ಜವಾಬ್ದಾರಿ ಇದೆ. ಕೇವಲ ಹಣ ಸಂಪಾದನೆ ಹಾಗೂ ಆರ್ಥಿಕ ಚಟುವಟಿಕೆಯನ್ನು ಮಾತ್ರ ನೋಡದೆ, ಜನರ ಸುರಕ್ಷತೆ ಹಾಗೂ ಆರೋಗ್ಯವನ್ನು ಕೂಡ ನೋಡಬೇಕು. ಕೇವಲ ಒಂಬತ್ತು ದಿನಗಳು ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಹೊಸ ಪ್ರಭೇದದ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎಂದರು.
ಬೆಂಗಳೂರಿನ ಆರ್ಚ್ ಬಿಷಪ್ ನವರು ನನಗೆ ಮಾಹಿತಿ ಕಳುಹಿಸಿದ್ದಾರೆ. ಯಾವುದೇ ಸಮಾರಂಭ ಮಾಡುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದೇನೆ ಎಂದರು.