ಮಡಿಕೇರಿ: ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದು ಇಬ್ಬರು ನಾಪತ್ತೆಯಾಗಿ 15 ದಿನಗಳೇ ಕಳೆದಿವೆ. ಈ ಇಬ್ಬರ ಹುಡುಕಾಟಕ್ಕಾಗಿ ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸೇರಿದ್ದಂತೆ 100ಕ್ಕೂ ಹೆಚ್ಚು ಜನರು ನಿರಂತರ ಹುಡುಕಾಟ ನಡೆಸುತ್ತಲೇ ಇದ್ದಾರೆ.
ಭೂಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಶ್ರೀನಿವಾಸ್ ಮತ್ತು ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಈ ಇಬ್ಬರು ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆಸಿರುವ ಎನ್.ಡಿ.ಆರ್.ಎಫ್ ತಂಡದ ಕಮಾಂಡರ್ ಇದುವರೆಗೆ ಎಷ್ಟು ಸಾಧ್ಯವೋ ಅಷ್ಟು ಹುಡುಕಿದ್ದೇವೆ. ಮಳೆ ಕೂಡ ಬಿಟ್ಟು ಬಿಟ್ಟು ಬರುತ್ತಲೇ ಇದ್ದು, ಭಾರೀ ಪ್ರಮಾಣದ ಮಂಜು ಸುರಿಯುತ್ತಿದೆ. ಹೀಗಾಗಿ ಇನ್ನೂ ಹುಡುಕಾಡುವುದು ಸವಾಲಿನ ಕೆಲಸ ಎನ್ನುತ್ತಿದ್ದಾರೆ.
ಒಂದು ವೇಳೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂಕುಸಿತದಲ್ಲಿ ಕಣ್ಮರೆ ಆಗಿರುವವರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ರೀತಿಯಲ್ಲಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಬ್ರಹ್ಮಗಿರಿ ಬೆಟ್ಟ ಕುಸಿದು ಐದು ಜನರು ಕಣ್ಮರೆಯಾಗಿದ್ದರು. ಬಳಿಕ ಅರ್ಚಕ ನಾರಾಯಣ ಆಚಾರ್ ಅವರ ಸಹೋದರ ಆನಂದತೀರ್ಥ ಮತ್ತು ಸಹಾಯಕ ಅರ್ಚಕ ರವಿಕಿರಣ್ ಅವರ ಮೃತದೇಹಗಳು ಪತ್ತೆಯಾಗಿದ್ದವು. ಇನ್ನುಳಿದ ಇಬ್ಬರಿಗಾಗಿ ರಕ್ಷಣಾ ತಂಡಗಳು ನಿರಂತರ ಹುಡುಕಾಟ ನಡೆಸುತ್ತಿದ್ದವು. ಅದರೆ ಇಂದಿಗೂ ಮೃತ ದೇಹ ದೊರಕ್ಕಿಲ್ಲ. ಹೀಗಾಗಿ ಬಹುತೇಕ ಇಂದು ಸಂಜೆಯಿಂದ ಕಾರ್ಯಚರಣೆ ಸ್ಥಗಿತ ಮಾಡುವುದಾಗಿ ಎನ್.ಡಿ.ಆರ್.ಎಫ್ ತಿಳಿಸಿದೆ.