ಮಂಡ್ಯ: ಏಕಾಏಕಿ ನಾಪತ್ತೆಯಾಗಿದ್ದವನು ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಂದೆ ಚಿಕ್ಕಹುಚ್ಚೇಗೌಡ, ಮಗ ಕುಮಾರಸ್ವಾಮಿ (61) ಮೃತರಾಗಿದ್ದಾರೆ. ದುಷ್ಕರ್ಮಿಗಳು ಮನಸೋಚ್ಛೆ ಹಲ್ಲೆ ನಡೆಸಿ ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾರೆ. ಆತನ ಮೃತದೇಹ ಬಿದ್ದಿದ್ದ ಸ್ಥಿತಿ ನೋಡಿ ಇಡೀ ಗ್ರಾಮಸ್ಥರೇ ಬೆಚ್ಚಿ ಬಿದ್ದಿದ್ದಾರೆ.
ಜಮೀನು ಹಾಗೂ ನಿವೇಶನದ ವಿಚಾರವಾಗಿ ಹಲವು ವರ್ಷಗಳಿಂದ ದಾಯಾದಿಗಳ ನಡುವೆ ಜಗಳ ನಡೆಯುತ್ತಿತ್ತು. ಮೇ 31ರ ರಾತ್ರಿ ಮೃತ ಕುಮಾರಸ್ವಾಮಿ ತಂದೆ ಚಿಕ್ಕಹುಚ್ಚೇಗೌಡ ವಯೋಸಹಜವಾಗಿ ಸಾವನ್ನಪ್ಪಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋದಾಗ ಆತನ ಸಹೋದರರು ಹಾಗೂ ಸಹೋದರಿಯರು ಜಗಳ ತೆಗೆದು ಮುಖನೋಡಲು ಬಿಡದೆ ವಾಪಸ್ ಕಳುಹಿಸಿದ್ದರು.
ಜೂನ್ 1ರಂದು ಮುಂಜಾನೆ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ಹೊರಗೆ ಕಟ್ಟಿಹಾಕಿದ್ದ ಕುಮಾರಸ್ವಾಮಿ, ಬಳಿಕ ನಾಪತ್ತೆಯಾಗಿದ್ದನು. ಎಲ್ಲಾ ಕಡೆ ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಮಾರನೆಯ ದಿನ ರಕ್ತ ಸಿಕ್ತ ಸ್ಥಿತಿಯಲ್ಲಿ ಆತನ ಮನೆಯ ಹಿಂಭಾಗದಲ್ಲೇ ಮೃತದೇಹ ಪತ್ತೆಯಾಗಿದೆ. ಬೇರೆ ಕಡೆ ಕೊಲೆಗೈದಿರುವ ದುಷ್ಕರ್ಮಿಗಳು ಒಂದು ದಿನದ ಬಳಿಕ ಶವವನ್ನು ತಂದು ಮನೆಯ ಹಿಂಭಾಗ ಬಿಸಾಕಿ ಹೋಗಿದ್ದಾರೆ.
ಕಿಕ್ಕೇರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಕುಮಾರಸ್ವಾಮಿ ಮಗ ಹರೀಶ್ ಕುಮಾರ್ ನೀಡಿರುವ ದೂರಿನ ಆಧಾರದ ಮೇಲೆ ಮೃತನ ತಮ್ಮ ಕೃಷ್ಣಮೂರ್ತಿ, ತಂಗಿ ಗಾಯಿತ್ರಿ ಸೇರಿದಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಗೂಢ ಕೊಲೆಯಿಂದಾಗಿ ಇಡೀ ಗ್ರಾಮಸ್ಥರೇ ಬೆಚ್ಚಿಬಿದ್ದಿದ್ದು, ಸಧ್ಯ ಕೆಲವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಹಂತಕರು ಯಾರೆಂದು ತಿಳಿಯಲಿದೆ.