-ದೂರು ದಾಖಲಾದ 5 ಗಂಟೆಯಲ್ಲಿ ಆರೋಪಿಗಳು ಅರೆಸ್ಟ್
ಬೆಂಗಳೂರು: ಸುಪಾರಿ ನೀಡಿ ತಂದೆಯನ್ನ ಮಗನೇ ಕೊಲೆ ಮಾಡಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ದೂರು ದಾಖಲಾದ ಐದು ಗಂಟೆಯಲ್ಲಿ ರಾಮಮೂರ್ತಿ ನಗರ ಪೊಲೀಸರು ಕೊಲೆಯ ರಹಸ್ಯ ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜೇಶ್ ತಂದೆಯ ಕೊಲೆಗೆ ಸುಫಾರಿ ನೀಡಿದ ಮಗ. ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಮಗನ ಸಂಚಿಗೆ ಬಲಿಯಾದ ತಂದೆ. ರಾಜೇಶ್ ತನ್ನ ಸ್ನೇಹಿತರಾದ ಪಾರ್ಥಿಬನ್, ಸ್ಟಾನ್ಲಿ ಮತ್ತು ಆನಂದ್ ಎಂಬವರಿಗೆ 10 ಲಕ್ಷ ರೂಪಾಯಿ ನೀಡಿ ತಂದೆಯನ್ನು ಅಪಹರಿಸಿ ಕೊಲೆ ಮಾಡುವಂತೆ ಹೇಳಿದ್ದನು.
ಶುಕ್ರವಾರ ಬೆಳಗ್ಗೆ ಪನ್ನೀರ್ ಸೆಲ್ವಂ ದೇವಸ್ಥಾನಕ್ಕೆ ತೆರಳಿದ ವೇಳೆ ರಾಜೇಶ್ ಸ್ನೇಹಿತರು ಅಪಹರಿಸಿ ವಿಷದ ಇಂಜೆಕ್ಷನ್ ಚುಚ್ಚಿ ಕೊಲೆಗೈದಿದ್ದರು. ಇತ್ತ ಬೆಳಗ್ಗೆ 10 ಗಂಟೆಗೆ ತಂದೆ ಕಿಡ್ನಾಪ್ ಆಗಿದ್ದಾರೆಂದು ರಾಜೇಶ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲ ಆಯಾಮಗಳಲ್ಲಿಯೂ ತನಿಖೆ ಆರಂಭಿಸಿದ್ದರು.
ಈ ವೇಳೆ ಕೌಟುಂಬಿಕ ವಿಚಾರಗಳ ತನಿಖೆ ವೇಳೆ ಮಗನ ಮೇಲೆ ಸಂಶಯ ವ್ಯಕ್ತಪಡಿಸಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ದೂರು ದಾಖಲಾದ ಐದು ಗಂಟೆಯಲ್ಲಿಯೇ ಪೊಲೀಸರು ಕೊಲೆ ರಹಸ್ಯ ಪೊಲೀಸರು ಬೇಧಿಸಿದ್ದಾರೆ. ತಂದೆಯ ಅಕ್ರಮ ಸಂಬಂಧ ಹೊಂದಿದ್ದರಿಂದ ಆಸ್ತಿಯಲ್ಲಿ ಅವರಿಗೂ ಭಾಗ ನೀಡಬೇಕಾಗುತ್ತದೆ ಎಂದು ಕೊಲೆಗೆ ರಾಜೇಶ್ ಪ್ಲಾನ್ ಮಾಡಿದ್ದನು. ಈ ಹಿಂದೆಯೂ ಮೂರ್ನಾಲ್ಕು ಬಾರಿ ತಂದೆಯ ಮೇಲೆ ರಾಜೇಶ್ ದಾಳಿ ನಡೆಸಿದ್ದನು.