ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಬಂದಿರುವ ಮಜಾ ಭಾರತ ಖ್ಯಾತಿಯ ಲ್ಯಾಗ್ ಮಂಜು ತಮ್ಮ ಹಾಸ್ಯ, ಇತರ ಸ್ಪರ್ಧಿಗಳೊಂದಿಗಿನ ಒಡನಾಟ, ಮಾತಿನ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಈ ನಡುವೆ ಮಂಜು ಅವರಿಗೆ ಅವರ ತಂದೆ ಕರೆಮಾಡಿ ವಿಶೇಷ ಸಂದೇಶ ಒಂದನ್ನು ನೀಡಿದ್ದಾರೆ.
ಮನೆಮಂದಿಯೆಲ್ಲ ಒಂದಾಗಿ ಸೇರಿ ಮಾತನಾಡುತ್ತಿದ್ದಂತೆ ಸಡನ್ ಆಗಿ ಮಂಜು ಅವರನ್ನು ಅವರ ತಂದೆ ಧ್ವನಿ ಮೂಲಕ ಕರೆದು ಚೆನ್ನಾಗಿದ್ದೀಯಾ? ಎಂದು ವಿಚಾರಿಸಿ, ನೀನು ಬಿಗ್‍ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿರುವುದು ನಮಗೆ ತುಂಬಾ ಸಂತೋಷ ನೀಡಿದೆ. ನೀನು ಕ್ಯಾಪ್ಟನ್ ಪಟ್ಟವನ್ನು ಉತ್ತಮವಾಗಿ ನಿಭಾಯಿಸಿಕೊಂಡು ಹೋಗು. ಮನೆಯಲ್ಲಿದ್ದಾಗ ಯಾವರೀತಿ ಎಲ್ಲರ ಪ್ರೀತಿ ವಿಶ್ವಾಸಗಳಿಸಿಕೊಂಡು ಜನರೊಂದಿಗೆ ಬೆರೆಯುತ್ತಿದ್ದೆ ಅದೇ ರೀತಿ ಬಿಗ್‍ಬಾಸ್ ಮನೆಯಲ್ಲೂ ಇದ್ದು, ನಿನ್ನ ಕ್ಯಾಪ್ಟನ್ ಪಟ್ಟಕ್ಕೆ ಕೀರ್ತಿ ಸಿಗುವಂತಾಗಲಿ ಎಂದು ವಿಶೇಷವಾಗಿ ಹಾರೈಸಿದಿದ್ದಾರೆ.
ನಂತರ ಮಾತು ಮುಂದುವರಿಸಿ ನೀನು ಬಿಗ್‍ಬಾಸ್‍ಗೆ ಹೋಗುವ ಮುನ್ನ ಬಿದ್ದು ಕೈಗೆ ಗಾಯ ಮಾಡಿಕೊಂಡಿದ್ದೆ ಎಂದು ತಿಳಿದು ಬಂದಿತ್ತು. ಇದರಿಂದ ನಮ್ಮ ಮನಸ್ಸಿಗೆ ನೋವಾಯಿತು. ಆದರೂ ಕೂಡ ನಾವು ನಿನ್ನ ಕಷ್ಟ ಸುಖಗಳಿಗೆ ನಿನ್ನೊಂದಿಗೆ ಸದಾ ಜೊತೆಗಿರುವುದಾಗಿ ಧೈರ್ಯ ತುಂಬಿದರು.
ನಂತರ ಮಂಜು ನಾನು ನಮ್ಮ ಅಪ್ಪನನ್ನು ಇದುವರೆಗು ಮುಟ್ಟಿಲ್ಲ. ಅಪ್ಪನನ್ನು ತಬ್ಬಿಕೊಳ್ಳಬೇಕೆಂಬ ಆಸೆ ಇದೆ. ಆದರೆ ಇದುವರೆಗು ತಬ್ಬಿಕೊಂಡಿಲ್ಲ ಆದರೆ ನನ್ನ ತಮ್ಮ ಮಾತ್ರ ಅಪ್ಪನೊಂದಿಗೆ ಚೆನ್ನಾಗಿ ಬೆರೆಯುತ್ತಾನೆ. ನಾನು ಮನೆಯಲ್ಲಿ ಎದುರುಗಡೆ ಅಪ್ಪ ಇದ್ದರು ಮಾತನಾಡುವುದಿಲ್ಲ. ನಮಗೇನಿದ್ದರೂ ಅಮ್ಮ, ಅಮ್ಮನೊಂದಿಗೆ ಎಲ್ಲವನ್ನು ಹೇಳಿಕೊಳ್ಳುತ್ತೇನೆ ಎಂದು ಮನೆಯವರನ್ನು ನೆನಪಿಸಿಕೊಂಡರು.
ಮಂಜು ಅವರ ತಂದೆ ಮಾತನಾಡುತ್ತಿದ್ದಂತೆ, ಇತ್ತ ರಾಜೀವ್ ತಮ್ಮ ತಂದೆಯನ್ನು ನೆನೆದುಕೊಂಡು ಕಣ್ಣೀರು ಹಾಕಿದರು. ಇವರೊಂದಿಗೆ ವಿಶ್ವ ಕೂಡ ತಮ್ಮ ಕುಟುಂಬದವರನ್ನು ನೆನೆದುಕೊಂಡು ಭಾವುಕರಾದ್ರು.
ಮನೆಯಲ್ಲಿ ಕುಟುಂಬದವರೊಂದಿಗೆ ಜೊತೆಗಿದ್ದಾಗ ಕಳೆದುಕೊಂಡ ಕ್ಷಣಗಳನ್ನು ನೆನೆದುಕೊಂಡು ಇದೀಗ ಬಿಗ್‍ಬಾಸ್ ಸ್ಪರ್ಧಿಗಳು ಎಮೋಷನಲ್ ಆಗುತ್ತಿದ್ದಾರೆ. ಇದರಿಂದ ಜೊತೆಗಿದ್ದಾಗ ತಿಳಿಯದ ಮನುಷ್ಯನ ಬೆಲೆ ಜೊತೆಗಿಲ್ಲದೆ ಇದ್ದಾಗ ತಿಳಿಯುತ್ತದೆ ಎನ್ನುವಂತಿದೆ.