ಮಡಿಕೇರಿ: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆಯಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರು ಇದ್ದಾರೆ ಎನ್ನೋದು ಗೊತ್ತಾಗಿದೆ. ಇವರ ಜೊತೆ ರಾಜಕಾರಣಿಗಳಿದ್ದರೆ ಅವರಿಗೂ ಮುಲಾಜಿಲ್ಲದೆ ತಕ್ಕ ಶಿಕ್ಷೆಯಾಗಬೇಕು ಎಂದು ಮಡಿಕೇರಿ ಬಿಜೆಪಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು ಚಿತ್ರರಂಗದವರಿರಲಿ, ರಾಜಕಾರಣಿಗಳಿರಲಿ ಯಾರು ತಪ್ಪು ಮಾಡಿದರೂ ಅದು ತಪ್ಪೇ. ಡ್ರಗ್ಸ್‍ನಿಂದಾಗಿ ನಮಗೆ ಉಳಿಗಾಲವಿಲ್ಲ. ಈ ವ್ಯವಸ್ಥೆಯನ್ನೇ ಡ್ರಗ್ಸ್ ಹಾಳುಮಾಡುತ್ತದೆ ಎಂದು ಕಿಡಿಕಾರಿದರು.
ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಸುಮ್ಮನೆ ಬಿಡಬಾರದು. 10 ವರ್ಷಗಳ ಹಿಂದೆ ಪಿಟೀಷನ್ ಕಮಿಟಿಯಲ್ಲಿ ನಾನೂ ಕೂಡ ಇದ್ದೆ. ಆ ವೇಳೆ ಡ್ರಗ್ಸ್ ರೀತಿಯ ಮಾರಾಟ ಚಟುವಟಿಕೆಗಳಿಗೆ ಹೇಗೆ ಕಡಿವಾಣ ಹಾಕಬೇಕು. ಎಲ್ಲೆಲ್ಲಿ ಕಾಲೇಜುಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಆ ಮೂಲಕ ಹೇಗೆ ಕಾನೂನು ಬಾಹಿರವಾದ ಈ ಚಟುವಟಿಕೆಯನ್ನು ಮಟ್ಟಹಾಕಬೇಕು ಎಂದು ಶಿಫಾರಸು ಮಾಡಿದ್ದೆವು ಎಂದರು.
ಕೊಡಗಿನ ಹಲವೆಡೆ ಗಾಂಜಾ ಸೊಪ್ಪು ಬೆಳೆ ಮತ್ತು ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.