ಮುಂಬೈ: ಬಾಲಿವುಡ್ ನಟರಾದ ಶಾರೂಖ್ ಖಾನ್, ಅರ್ಜುನ್ ರಾಂಪಾಲ್, ರಣ್‍ಬೀರ್ ಕಪೂರ್ ಮತ್ತು ಡಿನೋ ಮೊರಿಯಾ ಹೆಸರು ಡ್ರಗ್ಸ್ ಜಾಲದಲ್ಲಿ ಕೇಳಿ ಬಂದಿದೆ. ಇಷ್ಟು ದಿನ ಡ್ರಗ್ಸ್ ಜಾಲದಲ್ಲಿ ನಟಿಯರ ಹೆಸರು ಕೇಳಿ ಬಂದಿತ್ತು. ಇದೀಗ ಮೊದಲ ಬಾರಿಗೆ ನಾಲ್ವರು ಹೆಸರಗಳು ಡ್ರಗ್ಸ್ ಜಾಲದ ಅಂಗಳದಲ್ಲಿ ಗಿರಕಿ ಹೊಡೆಯುತ್ತಿವೆ. ಖಾಸಗಿ ವಾಹಿನಿಯೊಂದು ನಾಲ್ವರ ಹೆಸರುಗಳನ್ನು ಖಚಿತಪಡಿಸಿ ವರದಿ ಬಿತ್ತರಿಸಿದೆ.
ಹೆಸರು ಹೇಳಲು ಇಚ್ಛಿಸದ ಎನ್‍ಸಿಬಿ ಅಧಿಕಾರಿಯೊಬ್ಬರು ಈ ನಾಲ್ವರ ಹೆಸರನ್ನ ರಿವೀಲ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಖಾಸಗಿ ಮಾಧ್ಯಮಗಳು ಎಸ್, ಎ, ಆರ್ ಮತ್ತು ಡಿ ಹೆಸರಿನ ಸ್ಟಾರ್ ಗಳು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎಂದು ಪ್ರಕಟಿಸಿದ್ದವು. ಇದೀಗ ಮತ್ತೊಂದು ವಾಹಿನಿ ಎನ್‍ಸಿಬಿ ಹೇಳಿಕೆಯನ್ನಾಧರಿಸಿಯೇ ಈ ನಾಲ್ವರ ಹೆಸರನ್ನು ಬಹಿರಂಗಪಡಿಸಿದ್ದೇವೆ ಎಂದು ತಿಳಿಸಿದೆ.
ಎನ್‍ಸಿಬಿ ಅಧಿಕಾರಿ ಜೊತೆ ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ತಮ್ಮ ಬಳಿಯಲ್ಲಿದೆ ಎಂದು ಖಾಸಗಿ ವಾಹಿನಿ ಹೇಳಿದೆ. ಈ ನಾಲ್ವರ ಹೆಸರನ್ನು ಬಂಧಿತ ಡ್ರಗ್ಸ್ ಪೆಡ್ಲರ್ ಹೇಳಿದ್ದಾನೆ. ಆದ್ರೆ ಡಿನೋ ಮೋರಿಯಾ ಡ್ರಗ್ಸ್ ಸೇವನೆ ಮಾಡ್ತೀದ್ದೀರಾ ಅಥವಾ ಪೂರೈಕೆದಾರರಾಗಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ ಎನ್ನಲಾಗಿದೆ.
ಸದ್ಯ ಶಾರೂಖ್ ಖಾನ್ ದುಬೈನಲ್ಲಿ ಐಪಿಎಲ್ ಪಂದ್ಯಗಳಲ್ಲಿ ತಂಡದ ಜೊತೆಯಲ್ಲಿದ್ದಾರೆ. ಅರ್ಜುನ್ ರಾಂಪಾಲ್ ಮುಂಬೈನಲ್ಲಿಯೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಣ್‍ಬೀರ್ ಕಪೂರ್ ಕೆಲ ದಿನಗಳ ಹಿಂದೆ ಕುಟುಂಬಸ್ಥರ ಜೊತೆ ಬರ್ತ್ ಡೇ ಆಚರಿಸಿಕೊಂಡಿದ್ದರು. ಡಿನೋ ಮೊರಿಯಾ ಸಹ ಮುಂಬೈನಲ್ಲಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.