ಬಾಗಲಕೋಟೆ: ರಾಗಿಣಿ-ಪಾಗಿಣಿ ನನಗೆ ಗೊತ್ತಿಲ್ಲ. ಯಾರೇ ತಪ್ಪು ಮಾಡಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ದರೂ, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ರಾಜಕಾರಣಿಗಳ ಮಕ್ಕಳಿರಲಿ, ಅಧಿಕಾರಿಗಳ ಮಕ್ಕಳೇ ಇರಲಿ, ಯಾರ ಮಕ್ಕಳಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
Advertisement
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಡ್ರಗ್ಸ್ ವಿವಾದದಲ್ಲಿ ಸಿಲುಕಿದವರ ಮೇಲೆ ಈಗಾಗಲೇ ಕ್ರಮ ಶುರುವಾಗಿದೆ. ತನಿಖೆ ನಡೆಯುತ್ತಿದೆ, ತನಿಖೆ ಮುಗಿಯುವವವರೆಗೆ ನಾವೇನೂ ಹೇಳಲು ಸಾಧ್ಯವಿಲ್ಲ. ತನಿಖೆ ಮುಗಿಯುವ ವರೆಗೂ ವಿಷಯವನ್ನು ಗೌಪ್ಯವಾಗಿ ಇಡಲಾಗುತ್ತದೆ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ಎಲ್ಲರಿಗೂ ಮಾಹಿತಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಕಾರಜೋಳ ತಿಳಿಸಿದರು.
Advertisement
ಇದು ಕೇವಲ ಕಾನೂನಿನಿಂದ ಬಗೆ ಹರಿಯುವ ಸಮಸ್ಯೆ ಅಲ್ಲ, ತನಿಖೆ ನಡೆಯುತ್ತಿದೆ. ಗೌಪ್ಯತೆ ಕಾಪಾಡಬೇಕಾಗುತ್ತದೆ. ಜನರಿಗೆ ಈ ಬಗ್ಗೆ ತಿಳುವಳಿಕೆ ಬರಬೇಕು. ಇಂತಹ ಚಟುವಟಿಕೆಗಳಿಂದ ಜೀವಕ್ಕೆ ಕುತ್ತು ಬರುತ್ತೆ. ಈ ರೀತಿ ನಡೆಯದಂತೆ ಇಡೀ ಸಮಾಜ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
Advertisement
Advertisement
ಡ್ರಗ್ಸ್ ಮಾಫಿಯಾದಿಂದ ಮೈತ್ರಿ ಸರ್ಕಾರ ಕೆಡವಿದರು ಎಂಬ ಕುಮಾರಸ್ವಾಮಿಯವರ ಆರೋಪದ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಆರೋಪದಲ್ಲಿ ಸತ್ಯಾಂಶ ಇಲ್ಲ. ಅವರ ಆರೋಪ ಕೇವಲ ರಾಜಕೀಯ ಪ್ರೇರಿತ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.