ಮುಂಬೈ: ಮಹಿಳೆಯೊಬ್ಬಳು ಡೇಟಿಂಗ್ ಆ್ಯಪ್ ಮೂಲಕ ಟೆಕ್ಕಿಗೆ 6 ಲಕ್ಷ ರೂ.ಗಳ ಪಂಗನಾಮ ಹಾಕಿದ್ದು, ಬ್ಲಾಕ್ ಮೇಲ್ ಮಾಡಿ ಹಣ ಕಿತ್ತುಕೊಂಡಿದ್ದಾಳೆ.
Advertisement
ಮುಂಬೈನ ಘಾಟ್ಕೋಪರ್ ಬಳಿ ಈ ಘಟನೆ ನಡೆದಿದ್ದು, ಮಹಿಳೆಯ ಮಾತು ನಂಬಿ ಸಾಫ್ಟ್‍ವೇರ್ ಎಂಜಿನಿಯರ್ ಮೋಸ ಹೋಗಿ, 6 ಲಕ್ಷ ರೂ. ಕಳೆದುಕೊಂಡಿದ್ದಾರೆ. ದೀಪಾಲಿ ಜೈನ್ ಡೆಟಿಂಗ್ ಆ್ಯಪ್ ಮೂಲಕ ಟೆಕ್ಕಿಯನ್ನು ಪರಿಚಯ ಮಾಡಿಕೊಂಡಿದ್ದು, ಕೆಲ ಕಾಲ ಚಾಟ್ ಮಾಡಿದ್ದಾಳೆ. ಬಳಿಕ ಭೇಟಿಯಾಗಲು ತಿಳಿಸಿದ್ದಾಳೆ. ಈ ವೇಳೆ ಟೆಕ್ಕಿ ದೀಪಾಲಿ ಮನೆಗೆ ತೆರಳಿದ್ದು, ಆಗ ಅವಳೊಂದಿಗಿದ್ದ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದ್ದಾಳೆ. ಅಲ್ಲದೆ 6 ಲಕ್ಷ ರೂ. ಕಿತ್ತುಕೊಂಡಿದ್ದಾಳೆ.
Advertisement
ಘಟನೆ ನಡೆಯುತ್ತಿದ್ದಂತೆ 45 ವರ್ಷದ ಭಿವಾಂಡಿಯ ಟೆಕ್ಕಿ ಶಾಂತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡೇಟಿಂಗ್ ಆ್ಯಪ್‍ನಲ್ಲಿ ದೀಪಾಲಿ ಜೈನ್(50) ಪರಿಚಯವಾಗಿದ್ದು, ಬಳಿಕ ಅರಿಹಂತ್ ಸಿಟಿ ಕಾಂಪ್ಲೆಕ್ಸ್ ಬಳಿಯ ತನ್ನ ಮನೆಗೆ ಕರೆದಳು. ನಾನು ಸಹ ಮನೆಗೆ ಹೋದೆ ಎಂದು ತಿಳಿಸಿದ್ದಾರೆ.
Advertisement
Advertisement
ಮನೆಯಲ್ಲಿ ದೀಪಾಲಿ ಹೊರತಾಗಿ ಇನ್ನೂ ಇಬ್ಬರು ಮಹಿಳೆಯರು ಸೇರಿ ಒಟ್ಟು ನಾಲ್ಕು ಜನ ಇದ್ದರು ಎಂಬುದು ನನಗೆ ಅರಿವಿರಲಿಲ್ಲ. ನಾನು ದೀಪಾಲಿ ಜೈನ್ ಜೊತೆಗಿರುವ ಚಿತ್ರಗಳನ್ನು ಅವರು ಕ್ಲಿಕ್ಕಿಸಿದ್ದರು. ಬಳಿಕ ನನ್ನನ್ನು ರೂಮ್‍ನಲ್ಲಿ ಕೂಡಿ ಹಾಕಿದರು. ನಂತರ ನನ್ನ ಮೊಬೈಲ್‍ನಲ್ಲಿ ಜೈನ್ ಜೊತೆ ಚಾಟ್ ಮಾಡಿದ ಮೆಸೇಜ್‍ಗಳನ್ನು ಡಿಲೀಟ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟರು. ಅಲ್ಲದೆ ಹಣ ಕೊಡದಿದ್ದರೆ, ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದರು ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ಇದರಿಂದ ಭಯಭೀತನಾಗಿ 4 ಲಕ್ಷ ರೂ.ಗಳನ್ನು ನನ್ನ ಮೂರು ಬ್ಯಾಂಕ್ ಖಾತೆಗಳಿಂದ ಜೈನ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದೆ. ಇಷ್ಟಕ್ಕೆ ಸುಮ್ಮನಾಗದೆ ನನ್ನ ಕ್ರೆಡಿಟ್ ಕಾರ್ಡ್‍ನಿಂದ 2 ಲಕ್ಷ ರೂ.ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್ ಹಾಗೂ ಚಿನ್ನದ ಒಡವೆಗಳನ್ನು ಕೊಡಿಸುವಂತೆ ಆದೇಶಿಸಿದರು. ಎಲ್ಲ ಕಸಿದುಕೊಂಡ ಬಳಿಕ ಬೆದರಿಕೆ ಹಾಕಿ ನನ್ನನ್ನು ಕಳುಹಿಸಿದರು ಎಂದು ಪೊಲೀಸರಿಗೆ ಟೆಕ್ಕಿ ವಿವರಿಸಿದ್ದಾರೆ.
ಜೈನ್ ಮನೆಯಿಂದ ಹೊರಗೆ ಬರುತ್ತಿದ್ದಂತೆ ಟೆಕ್ಕಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ತಕ್ಷಣವೇ ಮನೆಯ ಮೇಲೆ ದಾಳಿ ನಡೆಸಿ, ಜೈ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ. ಬೆದರಿಕೆ ಒಡ್ಡಿರುವುದು ಹಾಗೂ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಐಪಿಸಿ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ. ಐದನೇ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.