ಡೆತ್ ನೋಟ್ ಬರೆದು, ಸೆಲ್ಫಿ ವೀಡಿಯೋ ಮಾಡಿ ಅರ್ಚಕ ಆತ್ಮಹತ್ಯೆ

Public TV
1 Min Read
CKB PRIEST

ಚಿಕ್ಕಬಳ್ಳಾಪುರ: ದಿನೇ ದಿನೇ ಮೀಟರ್ ಬಡ್ಡಿ ದಂಧೆಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಎಲ್ಲರನ್ನು ಬಲಿ ಪಡೆದುಕೊಳ್ಳುತ್ತಿರುವ ಬಡ್ಡಿ ದಂಧೆ ಇದೀಗ ದೇವರಿಗೆ ಪೂಜೆ ಮಾಡುವ ದೇವಸ್ಥಾನದ ಅರ್ಚಕನ ಪ್ರಾಣವನ್ನು ಬಲಿ ತೆಗೆದುಕೊಂಡಿದೆ.

ಒಂದಲ್ಲ ಅಂತ ಮೂರು ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡುವುದರ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದ ಯುವ ಅರ್ಚಕನೋರ್ವ ಸಾಲಗಾರರ ಕಿರುಕುಳ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನಪೇಟೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Police Jeep 1 2 medium

ಆತ್ಮಹತ್ಯೆ ಮಾಡಿಕೊಂಡ ಆರ್ಚಕ ಕೆ.ವಿ.ರಾಘವೇಂದ್ರ(30) ಎಂದು ಗುರುತಿಸಲಾಗಿದೆ. ಸುಲ್ತಾನಪೇಟೆ ಗ್ರಾಮದ ಸಪ್ಪಲಮ್ಮ ದೇವಸ್ಥಾನ ಹಾಗೂ ನಂದಿಗ್ರಾಮದ ಮಾರಮ್ಮ ದೇವಸ್ಥಾನ ಸೇರಿದಂತೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ರಾಘವೇಂದ್ರ, ಅಕ್ಷತಾ ಕೋ ಆಪರೇಟಿವ್ ಸಂಘದಲ್ಲಿ ಏಜೆಂಟ್ ಆಗಿ ನಷ್ಟವಾದಾಗ ನಂದಿ ಗ್ರಾಮದ ಜೆ.ಸಿ.ಬಿ ಮಂಜುನಾಥ್, ಗುರುಮೂರ್ತಿ, ಅಜಯೇಂದ್ರ ಬಾಬು, ಪ್ರಾಧ್ಯಾಪಕ ರಾಮಚಂದ್ರಪ್ಪ, ಎನ್.ಎಂ.ಮುನಿರಾಜು, ಎನ್.ಎಲ್ ನರೇಂದ್ರ ಬಾಬು ಬಳಿ ಸಾಲ ಪಡೆದಿದ್ದಾರೆ.

ಆದ್ರೆ ಇತ್ತೀಚೆಗೆ ಸಾಲಗಾರರು ಮೀಟರ್ ಬಡ್ಡಿ ವಿಧಿಸಿ ಹಣ ಕೊಡುವಂತೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ಧಾರೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಘವೇಂದ್ರ ಡೆತ್ ನೋಟ್ ಬರೆದು, ಸೆಲ್ಫಿ ವೀಡಿಯೋನಲ್ಲಿ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಮೃತನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನ್ಯಾಯಕ್ಕಾಗಿ ನಂದಿಗಿರಿಧಾಮದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Police Jeep

ಆತ್ಮಹತ್ಯೆಗೆ ಶರಣಾಗಿದ್ದ ರಾಘವೇಂದ್ರನನ್ನು ಮಂಗಳವಾರ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದರು. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿರಲಿಲ್ಲ. ಈ ಮಧ್ಯೆ ಮನೆ ಕ್ಲೀನ್ ಮಾಡುವ ವೇಳೆ ಸಿಕ್ಕ ಡೆತ್ ನೋಟ್ ಹಾಗೂ ಡೆತ್ ನೋಟ್‍ನಲ್ಲಿ ಮೊಬೈಲ್‍ನಲ್ಲಿ ವೀಡಿಯೋ ಮಾಡಿರುವ ಬಗ್ಗೆ ರಾಘವೇಂದ್ರ ಬರೆದಿದ್ದು, ಫೋನ್ ಆನ್‍ಲಾಕ್ ಹೇಗೆ ಮಾಡಬೇಕೆಂಬುವುದನ್ನು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ರಾಘವೇಂದ್ರ ಮೊಬೈಲ್ ಫೋನ್ ಪರಿಶೀಲಿಸಿದಾಗ ಸಾವಿನ ಸತ್ಯ ಬಹಿರಂಗಗೊಂಡಿದೆ.

Share This Article