ನವದೆಹಲಿ: ದೇಶದಲ್ಲಿ ಉಂಟಾಗಿರುವ ಲಸಿಕೆ ಅಭಾವ ಶೀಘ್ರದಲ್ಲೇ ಸರಿಹೊಂದಲಿದೆ. ಡಿಸೆಂಬರ್ ವೇಳೆಗೆ ದೇಶದಲ್ಲಿರುವ ಎಲ್ಲರಿಗೂ ಕೊರೊನಾ ಲಸಿಕೆ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.
ರಾಜಸ್ಥಾನದ ಕೋವಿಡ್ ಪರಿಸ್ಥಿತಿ ಕುರಿತು ವರ್ಚುವಲ್ ಮಾತುಕತೆ ವೇಳೆ ಮಾತನಾಡಿದ ಅವರು, ಲಸಿಕೆ ಕುರಿತು ಕಾಂಗ್ರೆಸ್ ದೇಶದ ಜನರ ದಾರಿ ತಪ್ಪಿಸುತ್ತಿದೆ. ಕೊರೊನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿರುವಾಗ ಈ ರೀತಿ ಜನರಿಗೆ ಲಸಿಕೆ ಕುರಿತು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಪ್ರಧಾನಿ ಮೋದಿ ಅವರು ಮಾರ್ಚ್ ತಿಂಗಳಲ್ಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೊರೊನಾ ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಮುಂದೆ ಲಸಿಕೆ ಲಭ್ಯತೆ ಕುರಿತು ಭಯ ಬೇಡ ಎಂದು ಧೈರ್ಯ ತುಂಬಿದರು.
ದೇಶದಲ್ಲಿ ಈಗಾಗಲೇ ಎರಡು ಸ್ವದೇಶಿ ಲಸಿಕೆಯನ್ನು ಕಳೆದ 9 ತಿಂಗಳ ಅಂತರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈವರೆಗೆ ದೇಶದ 18 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ಸಿಗಲಿದೆ ಎಂದು ಮಾಹಿತಿ ಹಂಚಿಕೊಂಡರು.
ರಾಜ್ಯಗಳಿಗೆ ಬೇಕಾಗುವ ಆಕ್ಸಿಜನ್ ಮತ್ತು ಔಷಧಿಗಳನ್ನು ಕೇಂದ್ರ ಸರ್ಕಾರ ಪೂರೈಸುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಸುಖಾಸುಮ್ಮನೆ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ. ಈ ಮೂಲಕ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಟೀಕೆ ಮಾಡಿದರು.