ಪಾಟ್ನಾ: ಕಳೆದ ಮಾರ್ಚ್ ತಿಂಗಳಿನಿಂದ 34 ವರ್ಷದ ನಾಗ್ಪುರ ಮಹಿಳೆಯೊಬ್ಬರು ತನ್ನ ಹೆತ್ತವರ ಮನೆಗೆ ಹೋಗಬೇಕೆಂದು ಬಯಸಿದ್ದಾರೆ. ಆದರೆ ಆಕೆಯ ಪತಿ ಹಾಗೂ ಮನೆಯವರು ಒಂದು ತಿಂಗಳ ಮಗುವಿನ ಸಹಿತ ಆಕೆಯನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕಿದ ಅಚ್ಚರಿಯ ಘಟನೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ.
ತಮ್ಮ ಮಗಳನ್ನು ಕರೆದೊಯ್ಯಲು ಮಹಿಳೆಯ ಕುಟುಂಬಸ್ಥರು ಆಕೆಯ ಮನೆಗೆ ಬಂದಿದ್ದಾರೆ. ಈ ವೇಳೆ ಮಹಿಳೆಯ ಪತಿ ಮನೆಯವರು ಡಿವೋರ್ಸ್ ಪೇಪರಿಗೆ ಸಹಿ ಹಾಕಿದ ಬಳಿಕವಷ್ಟೇ ಕಳುಹಿಸುವುದಾಗಿ ಒತ್ತಡ ಹಾಕಿರುವುದಾಗಿ ಆರೋಪಿಸಲಾಗಿದೆ.
ಬೆಂಗಳೂರಿನಲ್ಲಿ ಪರಿಚಯ:
ಮಹಿಳೆಯನ್ನು ಸೋನಿಯಾ ದತ್ತಾ ಎಂದು ಗುರುತಿಸಲಾಗಿದೆ. ಈಕೆ ಎರಡು ವರ್ಷಗಳ ಹಿಂದೆ ನಗರದಲ್ಲಿ ಕೆಲಸ ಮಾಡುತ್ತಿದ್ದಾಗ ಪಾಟ್ನಾ ಮೂಲದ ವಿನಾಯಕ ಸಿಂಗ್(33) ಎಂಬಾತನ ಪರಿಚಯವಾಗಿದೆ. ವಿನಾಯಕ ಸಿಂಗ್ ಐಐಟಿ ಪದವೀಧರನಾಗಿದ್ದು, ಆನ್‍ಲೈನ್ ಹೂಡಿಕೆ ಕಂಪನಿಯ ಉದ್ಯೋಗಿಯಾಗಿದ್ದನು. ಹೀಗೆ ಆದ ಪರಿಚಯ ಪ್ರೇಮಕ್ಕೆ ಸಿಲುಕಿ ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವರ್ಷದ ಆಗಸ್ಟ್ 20 ರಂದು ಸೋನಿಯಾ ಗಂಡು ಮಗುವಿನ ಜನ್ಮ ನೀಡಿದ್ದರು.
ದೌರ್ಜನ್ಯ ಪ್ರಾರಂಭ:
ಮಗುವಾದ ಬಳಿಕ ಇವರಿಬ್ಬರ ದಾಂಪತ್ಯದಲ್ಲಿ ವೈಮನಸ್ಸುಗಳು ಹುಟ್ಟಿಕೊಂಡವು. ಹೆರಿಗೆಯಾದ ಬಳಿಕದ ರಜೆಯಲ್ಲಿರುವ ಈ ಸಂದರ್ಭದಲ್ಲಿ ದತ್ತಾ ಬಳಿ ತನಗೆ ವಿಚ್ಚೇದನ ನೀಡುವಂತೆ ಬೆದರಿಕೆ ಹಾಕಲು ಶುರು ಮಾಡಿದ್ದಾನೆ. ಅಲ್ಲದೆ ದತ್ತಾ ಯಾವುದಾದರೂ ಚಾನೆಲ್ ಹಾಕಿಕೊಂಡು ನೋಡುತ್ತಿರಬೇಕಾದರೆ ಬಂದು ತಡೆದು, ಆಕೆಗೆ ನಿಂದಿಸಿದ್ದಾನೆ. ಕೊರೊನಾ ಹಿನ್ನೆಲೆ ಲಾಕ್‍ಡೌನ್ ಹೇರುವ ಮೊದಲು ಒಂದು ವಾರ ಆತ ನನ್ನನ್ನು ನನ್ನ ತಾಯಿಗೆ ಮನೆಗೆ ಕಳುಹಿಸಿದ್ದನು. ಆದರೆ ಹೆರಿಗೆಯಾದ ಬಳಿಕ ದತ್ತಾ ಅವರನ್ನು ಸಿಂಗ್ ಹೆತ್ತವರ ಮನೆಗೆ ಹೋಗಲು ಬಿಡುತ್ತಿಲ್ಲ ಎನ್ನಲಾಗಿದೆ.
ಇತ್ತ ಗುರುವಾರ ಸಹೋದರಿ ಹಾಗೂ ಬಾವ, ದತ್ತಾರನ್ನು ತಾಯಿ ಮನೆಗೆ ಕರೆದೊಯ್ಯಲು ಬಂದಿದ್ದಾರೆ. ಈ ವೇಳೆ ದತ್ತಾ ತನ್ನ ಪುಟ್ಟ ಮಗುವಿನೊಂದಿಗೆ ಕತ್ತಲ ಕೋಣೆಯಲ್ಲಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ದತ್ತಾ ತನ್ನ ಸಹೋದರಿ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ನಾನು ಇಲ್ಲಿಂದ ಮನೆಗೆ ಬರಬೇಕಾದರೆ ನನ್ನ ಗಂಡನಿಗೆ ವಿಚ್ಚೇದನ ನೀಡಬೇಕು ಎಂದು ಬೆದರಿಕೆ ಹಾಕಿರುವ ವಿಚಾರವನ್ನು ಸಹೋದರಿ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೆ ದತ್ತಾ ಶುಕ್ರವಾರ ಸಂಜೆ ಡಿವೋರ್ಸ್ ಪೇಪೆರಿಗೆ ಸಹಿ ಹಾಕಿ ತಾಯಿ ಮನೆಗೆ ತೆರಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದತ್ತಾ ಪತಿ, ಕೊರೊನಾ ಭೀತಿಯಿಂದ ನಾನು ಪುಟ್ಟ ಮಗುವಿನ ಜೊತೆ ಆಕೆಯನ್ನು ತವರು ಮನೆಗೆ ಹೋಗದಂತೆ ತಡೆದಿದ್ದೇನೆ ಎಂದಿದ್ದಾನೆ.
ಘಟನೆ ಸಂಬಂಧ ಪಾಟ್ನಾ ಎಸ್‍ಪಿ ಉಪೇಂದ್ರ ಕುಮಾರ್ ಅವರು ಗುರುವಾರ ದತ್ತಾ ಅವರಿಂದ ದೂರು ಸ್ವೀಕರಿಸಿದ್ದಾರೆ. ಅಲ್ಲದೆ ದಂಪತಿ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್‍ಪಿ ತಿಳಿಸಿದ್ದಾರೆ.