ಚಿಕ್ಕಬಳ್ಳಾಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಅವರು ಶೀಘ್ರವಾಗಿ ಗುಣಮುಖರಾಗುಂತೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದಾರೆ.
ಡಿಕೆಶಿ ಆರೋಗ್ಯಕ್ಕಾಗಿ ಕಾಂಗ್ರೆಸ್ ಮುಖಂಡರು ಇಂದು ಚಿಕ್ಕಬಳ್ಳಾಪುರ ನಗರ ಹೊರವಲಯದ ಶ್ರೀ ವಿರಾಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ 501 ಈಡುಗಾಯಿ ಒಡೆದು ಪ್ರಾರ್ಥನೆ ಮಾಡಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿದ್ದ ಡಿಕೆಶಿ, ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಕೊರೊನಾ ಟೆಸ್ಟ್ ಮಾಡಿದ ವೇಳೆ ವರದಿ ಪಾಸಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯವಾಗಿದ್ದೇನೆ. ನಿಮ್ಮೆಲ್ಲರ ಆಶೀವಾದದಿಂದ ಶೀಘ್ರವೇ ಗುಣಮುಖವಾಗಿ ಬರುತ್ತೇನೆ. ಅಲ್ಲದೆ ಕೆಲ ದಿನಗಳಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಕೂಡ ಮಾಡಿಕೊಂಡಿದ್ದರು. ಸದ್ಯ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.