ಚಾಮರಾಜನಗರ: ಟ್ರಾಕ್ಟರ್ ಹರಿದು ಗಾಯಗೊಂಡಿದ್ದ 5 ವರ್ಷದ ಬಾಲಕ ಸಾವನ್ನಪ್ಪಿದ್ದು, ಈ ವಿಚಾರ ತಿಳಿದು ಚಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಚಾಲಕನನ್ನು ಸುನಿಲ್(23) ಎಂದು ಗುರುತಿಸಲಾಗಿದ್ದು, ಮೈಸೂರಿನಲ್ಲಿ ಪಿಎಚ್ ಡಿ ಮಾಡುತ್ತಿದ್ದನು. ಈತ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಹರಿದು 5 ವರ್ಷದ ಬಾಲಕ ಹರ್ಷ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ – ಇಂದು ಬಾಂಬ್ ಸಿಡಿಸ್ತಾರಾ ಬಸವರಾಜ್ ಮುತ್ತಗಿ..?
ಏನಿದು ಘಟನೆ..?
ಸವಕನಪಾಳ್ಯದಲ್ಲಿ ಕ್ರಿಕೆಟ್ ಆಡಲು ಮೈದಾನ ಸಮತಟ್ಟು ಮಾಡುವ ಕೆಲಸ ನಡೆಯುತ್ತಿತ್ತು. ಈ ವೇಳೆ ಸುನಿಲ್ ನಿಂತಿದ್ದ ಟ್ರಾಕ್ಟರ್ ಅನ್ನು ಚಲಾಯಿಸಿದ್ದಾರೆ. ಆಗ ಮೈದಾನದ ಅಂಚಿನಲ್ಲಿದ್ದ ಬಾಲಕನ ಮೇಲೆ ಟ್ರಾಕ್ಟರ್ ಹರಿದು ಗಂಭೀರ ಗಾಯಗೊಂಡಿದ್ದನು. ಕೂಡಲೇ ಗಾಯಾಳು ಬಾಲಕನನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ರವಾನೆ ಮಾಡಲಾಯಿತಾದರೂ ದಾರಿ ಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದನು.
ಬಾಲಕ ಅಸುನೀಗಿದ ವಿಚಾರ ತಿಳಿಯುತ್ತಿದ್ದಂತೆಯೇ ಮನನೊಂದ ಸುನಿಲ್ ಮೈಸೂರಿಗೆ ತೆರ ರೂಂನಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.