ಟೆಸ್ಟ್‌ಗೆ ವಿರಾಟ್, ಏಕದಿನಕ್ಕೆ ಕೆ.ಎಲ್.ರಾಹುಲ್ ನಾಯಕತ್ವ

Public TV
3 Min Read
KL Rahul Virat Kohli

– ಒಂದೇ ಸಮಯದಲ್ಲಿ ಎರಡು ದೇಶಗಳಿಗೆ ಪ್ರವಾಸ
– ಯಾವ ತಂಡದಲ್ಲಿ ಯಾರಿಗೆ ಸ್ಥಾನ

ನವದೆಹಲಿ: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಚಳಿಗಾಲದ ಋತುವಿನಲ್ಲಿ ಒಂದೇ ಸಮಯದಲ್ಲಿ ಎರಡು ಪಂದ್ಯಗಳನ್ನು ನಡೆಸಲು ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ಟೆಸ್ಟ್ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರೆ, ಏಕದಿನ ತಂಡವು ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಆಡಿ ಬಳಿಕ ತವರಿಗೆ ಮರಳಲಿದೆ.

ಬಿಸಿಸಿಐ ವೇಳಾಪಟ್ಟಿ ಹಾಗೂ ತಂಡವನ್ನು ಇನ್ನೂ ದೃಢಪಡಿಸಿಲ್ಲ. ಆದರೆ ಆರ್ಥಿಕ ನಷ್ಟವನ್ನು ಸರಿಪಡಿಸಿಕೊಳ್ಳಲು ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

Team India

ಒಂದೇ ಸಮಯದಲ್ಲಿ ಎರಡು ವಿಭಿನ್ನ ದೇಶಗಳಿಗೆ ಪ್ರವಾಸ ಕೈಗೊಳ್ಳುವುದಾದರೆ ಟೀಂ ಇಂಡಿಯಾಗೆ ಇಬ್ಬರು ನಾಯಕರು ಮತ್ತು ಎರಡು ವಿಭಿನ್ನ ತಂಡಗಳ ಅಗತ್ಯವಿದೆ. ಈ ಮೂಲಕ ಟೆಸ್ಟ್ ತಂಡ ಕ್ಯಾಪ್ಟನ್ ಜವಾಬ್ದಾರಿ ವಿರಾಟ್ ಕೊಹ್ಲಿ ಹೊತ್ತರೆ, ಕೆ.ಎಲ್.ರಾಹುಲ್ ಭಾರತ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ವರ್ಷ ಟೆಸ್ಟ್ ಪಂದ್ಯಗಳಲ್ಲಿ ಪ್ರಥಮ ಆಯ್ಕೆಯ ಓಪನರ್ ಆಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಅವರೊಂದಿಗೆ ಮಾಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಂತರದ ಬ್ಯಾಟಿಂಗ್ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಇರಲಿದ್ದಾರೆ. ಟೆಸ್ಟ್ ತಂಡ ಉಪನಾಯಕ ಅಜಿಂಕ್ಯ ರಹಾನೆ ಕೂಡ ಸ್ಥಾನ ಪಡೆಯಲಿದ್ದಾರೆ. ನ್ಯೂಜಿಲೆಂಡ್ ಪ್ರವಾಸದ ವೇಳೆ ಕಳಪೆ ಪ್ರದರ್ಶನ ತೋರಿದ ರಹಾನೆ ಅವರು ಟೀಕೆಗೆ ಗುರಿಯಾಗಿದ್ದರು. ಆದರೆ ಅವರನ್ನು ತಂಡದಿಂದ ಕೈಬಿಡುವ ನಿರೀಕ್ಷೆಯಿಲ್ಲ ಎಂದು ಹೇಳಲಾಗುತ್ತಿದೆ.

Team India pink ball Test

ಆಲ್‍ರೌಂಡರ್: ನ್ಯೂಜಿಲೆಂಡ್ ಸರಣಿಯ ತಂಡದಲ್ಲಿದ್ದ ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ಟೆಸ್ಟ್ ತಂಡದ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಆಡುವ ಇಲೆವೆನ್ ಭಾಗವಾಗಿದ್ದರೆ, ಕ್ರೈಸ್ಟ್ ಚರ್ಚ್‍ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಸ್ಥಾನ ಪಡೆದಿದ್ದರು.

ವಿಕೆಟ್ ಕೀಪರ್, ಬೌಲರ್: ತವರು ನೆಲದಲ್ಲಿ ಟೀಂ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಬೌಲಿಂಗ್ ಪಡೆಯಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಇಶಾಂತ್ ಶರ್ಮಾ, ಜಸ್‍ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

Team India Main 2

ಟೆಸ್ಟ್ ತಂಡ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಆರ್.ಅಶ್ವಿನ್, ವೃದ್ಧಿಮಾನ್ ಸಹಾ, ಇಶಾಂತ್ ಶರ್ಮಾ, ಜಸ್‍ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ

ಏಕದಿನ ತಂಡ:
ಟೀಂ ಇಂಡಿಯಾ ಅನುಭವಿ ಆಟಗಾರ ಶಿಖರ್ ಧವನ್ ಏಕದಿನ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಮೈದಾನಕ್ಕಿಳಿಯಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರನ್ ಗಳಿಸಲು ಪರದಾಡಿದ ಪೃಥ್ವಿ ಶಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಪೃಥ್ವಿ ಶಾ ಅವರು ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

Team India

ಮಧ್ಯಮ ಕ್ರಮಾಂಕಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಏಕದಿನ ತಂಡವನ್ನು ಮುನ್ನಡೆಸಲಿರುವ ರಾಹುಲ್ ಅವರನ್ನು ಫಿನಿಶಿಂಗ್‍ಗೆ ನಿಯೋಜಿಸಲಾಗಿದೆ. ಆದರೆ ಹಿರಿಯ ಬ್ಯಾಟ್ಸ್‍ಮನ್‍ಗಳ ಅನುಪಸ್ಥಿತಿಯಿಂದಾಗಿ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದು, ನಾಯಕ ಕೆ.ಎಲ್.ರಾಹುಲ್ ಅವರಿಗೆ ಸಾಥ್ ನೀಡಲಿದ್ದಾರೆ. ನಂತರದ ಕ್ರಮಾಂಕದಲ್ಲಿ ರಿಷಬ್ ಪಂತ್, ಮನೀಶ್ ಪಾಂಡೆ ಇರಲಿದ್ದಾರೆ.

ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದರು. ಆದರೆ ಕೊರೊನಾದಿಂದಾಗಿ ಸರಣಿಯನ್ನು ಮುಂದೂಡಲಾಯಿತು. ಆದರೆ ಮುಂಬರುವ ದಿನಗಳಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಭದ್ರಪಡಿಸಿಕೊಳ್ಳಲಿದ್ದಾರೆ.

ಕೆ.ಎಲ್.ರಾಹುಲ್ ನೇತೃತ್ವದ ಏಕದಿನ ತಂಡದ ಬೌಲರ್ ಪಡೆಯಲ್ಲಿ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್, ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್ ಸ್ಥಾನಪಡೆಯಲಿದ್ದಾರೆ. ಶಾರ್ದುಲ್ ಉತ್ತಮ ಬ್ಯಾಟ್ಸ್‌ಮನ್‌ ಕೂಡ ಆಗಿದ್ದು, ತಂಡಕ್ಕೆ ಕೊನೆಯಲ್ಲಿ ಆಸರೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಯಜುವೇಂದ್ರ ಚಹಲ್ ಅವರು ಆಡುವ ಇಲೆವೆನ್‍ನಲ್ಲಿ ಏಕೈಕ ಸ್ಪಿನ್ನರ್ ಆಗಲಿದ್ದಾರೆ. ಕುಲದೀಪ್ ಯಾದವ್ ಅವರ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಹೊರಗುಳಿಯಲಿದ್ದಾರೆ.

ಏಕದಿನ ತಂಡದ ಆಟಗಾರರು: ಶಿಖರ್ ಧವನ್, ಪೃಥ್ವಿ ಶಾ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್, ನವದೀಪ್ ಸೈನಿ.

Share This Article
Leave a Comment

Leave a Reply

Your email address will not be published. Required fields are marked *